
ಬೆಳ್ತಂಗಡಿ; ಅಶಕ್ತರಿಗೆ ಸಹಾಯ, ಅರ್ಹ ಹೆಣ್ಣುಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಕಾರ್ಯ ಮಹಿಳೆಯರಿಂದಲೇ ಆದಾಗ ಅದಕ್ಕೆ ಹೆಚ್ಚು ಮೌಲಿಕ ಅರ್ಥ ಬರುತ್ತದೆ ಎಂದು ವಿಶೇಷ ಸಂಪನ್ಮೂಲ ವ್ಯಕ್ತಿ, ಮಹಿಳಾ ತರಬೇತುದಾರೆ ಮನೋರಮಾ ಭಟ್ ಅಭಿಪ್ರಾಯಪಟ್ಟರು.
ಉಜಿರೆ ಕೇಂದ್ರಿತವಾಗಿ ಸಮಾನಮನಸ್ಕ ಮಹಿಳೆಯರನ್ನು ಒಟ್ಟುಸೇರಿಸಿ ಸಾಮಾಜಿಕ ಜಾಲತಾಣವಾದ ವಾಟ್ಸ್ ಆಪ್ ಮೂಲಕ ನೂತನಾಗಿ ರಚಿತವಾದ ಜೀವ ಕಾರುಣ್ಯ ಸಂಘಟನೆ
‘ನೊಂದ ಮನಗಳಿಗೆ ಬೆಳಕು ಚೆಲ್ಲುವ ದೀಪಗಳು’ ಎಂಬ ಧ್ಯೇಯ ವಾಕ್ಯದ “ಅಭಯ ಮಹಿಳಾ ವೃಂದ” ಇದರ ಉದ್ಘಾಟನಾ ಕಾರ್ಯಕ್ರಮ ಉಜಿರೆ ಶಾರದಾ ಮಂಟಪದಲ್ಲಿ ಜರುಗಿದ್ದು, ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.
ಈ ಬಳಗದಲ್ಲಿ ಇದೀಗ ತಾಲೂಕಿನ ಬೇರೆ ಬೇರೆ ಗ್ರಾಮದ ಮಹಿಳೆಯರು ಸೇರುತ್ತಿರುವುದರಿಂದ ಸೇವಾ ವ್ಯಾಪ್ತಿ ವಿಸ್ತಾರಗೊಳ್ಳುತ್ತಾ ಬರುತ್ತಿದೆ. ಮುಖ್ಯವಾಗಿ ಅನಾರೋಗ್ಯದಿಂದ ಬಳಲುತ್ತಿರುವ ಬಡ ಮಹಿಳೆಯರಿಗೆ ಹಾಗೂ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಚಿಂತನೆ ಅಪೂರ್ವವಾದದ್ದು ಎಂದರು. ವೃಂದಾ ಶರತ್ಕೃಷ್ಣ ಪಡುವೆಟ್ನಾಯ ಸಂಘಟನೆಯ ನೂತನ ಲೋಗೋ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು.
ಈ ಯೋಜನೆಯ ಕನಸು ಕಂಡು ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಪ್ರಮುಖ ಕಾರಣಕರ್ತರಾದ ಶುಭಾ ಕೆ ರೈ ಉಜಿರೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬಳಗದ ಸೇವಾ ಯೋಜನೆಗೆ ಇದೇ ವೇಳೆ ಚಾಲನೆ ನೀಡಿ, ತನ್ನ ಎರಡೂ ಮೂತ್ರಪಿಂಡ(ಕಿಡ್ನಿ) ವೈಫಲ್ಯಗೊಂಡು ಬಳಲುತ್ತಿರುವ ಮುಂಡಾಜೆ ಗ್ರಾಮದ ಕೂಳೂರು ನಿವಾಸಿ ಗೀತಾ ಅವರ ಚಿಕಿತ್ಸೆಗೆ ಅಭಯ ತಂಡದಿಂದ 25 ಸಾವಿರ ರೂ. ಗಳ ಮೊತ್ತವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಸಂಘಟಕರುಗಳಾದ ಲೋಕೇಶ್ವರಿ ವಿನಯಚಂದ್ರ, ಶಾಂತಾ ಬಂಗೇರ,ಉಜಿರೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಾ ಆರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.