ಮಡಂತ್ಯಾರು: ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಯಾಗಿ ಮಡಂತ್ಯಾರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಪಡ್ಪು ನಿಯುಕ್ತಿಗೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇವರನ್ನು ಮಾಜಿ ಶಾಸಕ ವಸಂತ ಬಂಗೇರ, ಎಂಎಲ್ಸಿ ಹಾಗು ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವರುಗಳಾದ ಗಂಗಾಧರ್ ಗೌಡ, ವಿನಯ ಕುಮಾರ್ ಸೊರಕೆ, ಬ್ಲಾಕ್ ಕಾಂಗ್ರೆಸ್ ನಗರ ವಿಭಾಗದ ಅಧ್ಯಕ್ಷ ಶೈಲೇಶ್ ಕುಮಾರ್, ಗ್ರಾಮೀಣ ವಿಭಾಗದ ಅಧ್ಯಕ್ಷ ರಂಜನ್ ಗೌಡ ಇವರುಗಳು ಶಿಫಾರಸ್ಸು ಮಾಡಿದ್ದು, ಕರ್ನಾಟಕ ರಾಜ್ಯ ಪ್ರದೇಶ ಕಾಂಗ್ರೆಸ್ನ ಅಧ್ಯಕ್ಷ ಡಿ.ಕೆ ಶಿವಕುಮಾರ್ ರವರ ಆದೇಶದ ಮೇರೆಗೆ ರಾಜ್ಯ ಕಾರ್ಮಿಕ ಕಾಂಗ್ರೆಸ್ ವಿಭಾಗದ ಅಧ್ಯಕ್ಷ ಪುಟ್ಟ ಸ್ವಾಮಿ ಗೌಡರವರು ನಿಯುಕ್ತಿಗೊಳಿಸಿ ಆದೇಶಿಸಿದ್ದಾರೆ.
ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ರಾಜ್ಯ ಉಪಾಧ್ಯಕ್ಷ ವಿಶ್ವನಾಥ್.ಸಿ, ಹರಿಣಿ ಗೌಡ, ಪ್ರಧಾನ ಕಾರ್ಯದರ್ಶಿ ದಿನೇಶ್ ಉಪಸ್ಥಿತರಿದ್ದರು.
ಅಬ್ದುಲ್ ರಹಿಮಾನ್ ಪಡ್ಪು ರವರು ಡಿಸಿಸಿ ಅಲ್ಪಸಂಖ್ಯಾತ ಕಾಂಗ್ರೆಸ್ ವಿಭಾಗದ ಉಪಾಧ್ಯಕ್ಷರಾಗಿ, ರಾಜ್ಯ ಅಸಂಘಟಿತ ಕಾರ್ಮಿಕ ಕಾಂಗ್ರೆಸ್ನ ಕಾರ್ಯದರ್ಶಿಯಾಗಿ, ಕೆಪಿಸಿಸಿಯ ರಾಜ್ಯ ಯುವ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿಯಾಗಿ, ಮಡಂತ್ಯಾರು ಗ್ರಾಮ ಪಂಚಾಯತದ ಉಪಾಧ್ಯಕ್ಷರಾಗಿ, ಬಿಎಸ್ಎನ್ಎಲ್ ಸಲಹಾ ಸಮಿತಿಯಲ್ಲಿ ಎರಡು ಅವಧಿಯಲ್ಲಿ ಸದಸ್ಯರಾಗಿ, ಹಾಗೂ ಮಡಂತ್ಯಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.