ಸೌತಡ್ಕ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಇಲಾಖೆ ಮತ್ತು ಎಂಡೋ ವಿರೋಧಿ ಹೋರಾಟ ಸಮಿತಿ ಕೊಕ್ಕಡ ಇದರ ಆಶ್ರಯದಲ್ಲಿ ಕಾನೂನು ಮಾಹಿತಿ, udid ಕಾರ್ಡ್ ಮಾಡಿಸುವ ವಿಧಾನ ಹಾಗೂ ವೈದ್ಯಕೀಯ ಶಿಬಿರ ನಡೆಯಲಿದೆ.
ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಗಣೇಶ ಕಲಾ ಮಂದಿರದಲ್ಲಿ ಫೆ.18ರಂದು ಶಿಬಿರ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಂಡೋ ಸಂತ್ರಸ್ತರ ಸಮಸ್ಯೆಗಳಿಗೆ ತ್ವರಿತವಾಗಿ ಪರಿಹಾರ ಒದಗಿಸುವ ಉದ್ದೇಶದಿಂದ ಈ ಶಿಬಿರವನ್ನು ಆಯೋಜಿಸಲಾಗಿದೆ.
ಶಿಬಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಜಿಲ್ಲಾ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಸಂಬಂಧ ಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು, ಉಡುಪಿ ಮಾನವ ಹಕ್ಕುಗಳ ಹಿತರಕ್ಷಣಾ ಸಂಚಾಲಕ ಡಾ. ರವೀಂದ್ರನಾಥ್ ಶಾನ್ ಭಾಗ್, ಮಾಹಿತಿ ಹಕ್ಕು ಕಾರ್ಯಕರ್ತ ಸಂಜೀವ ಕಬಕ ಮತ್ತು ಕೊಕ್ಕಡ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮನವಿ ಸಲ್ಲಿಸಲು ಅವಕಾಶ
ಮಾಶಾಸನ ಸ್ಥಗಿತಗೊಂಡಿರುವ ಸಂತ್ರಸ್ತರು, ಮಾಶಾಸನದ ಆದೇಶ ಪ್ರತಿ ಸಿಗದವರು, ಸ್ಮಾರ್ಟ್ ಕಾರ್ಡ್ ಸಿಗದವರು, ಹಾಗೂ ಬೇರೆ ಬೇರೆ ಬೇಡಿಕೆಗಳನ್ನು ಹೊಂದಿರುವ ಸಂತ್ರಸ್ತರು ತಮ್ಮ ಮನವಿಗಳನ್ನು ಸೂಕ್ತ ದಾಖಲೆಗಳೊಂದಿಗೆ ನ್ಯಾಯಾಧೀಶರಿಗೆ ಲಿಖಿತ ರೂಪದಲ್ಲಿ ಸಲ್ಲಿಸಲು ಅವಕಾಶವಿದೆ. ಹಾಗೇ
udid ಕಾರ್ಡ್ ಮಾಡಿಸಲು ಇಚ್ಛಿಸುವವರು ತಮ್ಮಲ್ಲಿರುವ ಅಂಗವಿಕಲರ ಗುರುತಿನ ಕಾರ್ಡ್, ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ನಾಲ್ಕು ಫಾಸ್ಪೋರ್ಟ್ ಸೈಜಿನ ಫೋಟೋವನ್ನು ಒದಗಿಸಬೇಕಾಗಿ ಎಂದು ತಿಳಿಸಲಾಗಿದೆ.