ಬಂಗರಪಲ್ಕೆ ಜಲಪಾತದಲ್ಲಿ ದುರಂತ: ಮಣ್ಣಿನಡಿ ಸಿಲುಕಿದ್ದ ಸನತ್ ಶೆಟ್ಟಿ ಶವ ಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಎಳನೀರು ಬಂಗರಬಳಿಗೆ ಅಬ್ಬಿ ಜಲಪಾತ ವೀಕ್ಷಣೆ ಮಾಡುತ್ತಿದ್ದವರ ಮೇಲೆ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿದ್ದ, ಉಜಿರೆಯ ನಿವಾಸಿ ವಿದ್ಯಾರ್ಥಿ ಸನತ್ ಶೆಟ್ಟಿ (19ವ)ಅವರ ಮೃತದೇಹ 22 ದಿನಗಳ ಕಾರ್ಯಾಚರಣೆ ಬಳಿಕ ಫೆ.16ರಂದು ಸಂಜೆ ಪತ್ತೆಯಾಗಿದ್ದು, ಎಲ್ಲಾ ಊಹಪೋಹಗಳಿಗೆ ತೆರೆ ಬಿದ್ದಿದೆ.
ಲಾಯಿಲ ಗ್ರಾಮದ ಕಾಶಿಬೆಟ್ಟು ನಿವಾಸಿ ವಾಸುದೇವ ಶೆಟ್ಟಿ ಎಂಬವರ ಪುತ್ರ ಹಾಗೂ ಉಜಿರೆ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ ತನ್ನ ನೆರೆಮನೆ ಸ್ನೇಹಿತ ಸೌರಭ್ ಹಾಗೂ ಇತರ ಸ್ನೇಹಿತರಾದ ಶರತ್, ಆದಿತ್ಯ, ಎಲ್ಯಣ್ಣ ಇವರ ಜೊತೆ ಕ್ರಿಕೆಟ್ ಆಡಲು ಜ.24ರಂದು ಕಳಸಕ್ಕೆ ಹೋಗಿದ್ದರು. ಆ ದಿನ ಅಲ್ಲೇ ಉಳಿದುಕೊಂಡು ಮರುದಿನ ಜ.೨೫ರಂದು ಮಲವಂತಿಗೆ ಗ್ರಾಮದ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಟ್ಟ ದುರ್ಗಮ ಸ್ಥಳ ಬಂಗಾರಪಲ್ಕೆ ಜಲಪಾತ ವೀಕ್ಷಣೆಗೆ ಹೋಗಿದ್ದರು. ಅಲ್ಲಿ ಜಲಪಾತ ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ಈ ದುರಂತ ನಡೆದಿತ್ತು. ಜಲಪಾತದ ಮೇಲ್ಗಡೆಯ ಗುಡ್ಡ ಮಣ್ಣು ಸಹಿತ ಬೃಹತ್ ಬಂಡೆಕಲ್ಲುಗಳು ಜಲಪಾತ ವೀಕ್ಷಿಸುತ್ತಿದ್ದವರ ಮೇಲೆ ಕುಸಿದು ಬಿದ್ದಿದ್ದು, ಇತರರು ಪಾರಾದರೆ, ಸನತ್ ಶೆಟ್ಟಿಯವರು ಮಣ್ಣಿನಡಿ ಸಿಲುಕಿಕೊಂಡು ನಾಪತ್ತೆಯಾಗಿದ್ದರು.


ಜ.೨೫ರಿಂದ ರಾಜ್ಯ ವಿಪತ್ತು ನಿರ್ವಹಣ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್, ವನ್ಯ ಜೀವಿವಿಭಾಗ, ಕಂದಾಯ, ಗ್ರಾಮ ಪಂಚಾಯತು, ಶ್ರೀ ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ, ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ತಂಡ, ಎಎನ್‌ಎಸ್ ಸೇರಿದಂತೆ ವಿವಿಧ ಸಂಘ-ಸಂಸ್ಥೆಯವರು, ಸ್ಥಳೀಯರು ಸೇರಿದಂತೆ ಪ್ರತಿದಿನ ಮಣ್ಣು ಬಂಡೆ ತೆರವುಗೊಳಿಸುವ ಕಾರ್ಯಾಚರಣೆ ನಿರಂತರವಾಗಿ ನಡೆದಿತ್ತು.
ಆರಂಭದ ಕೆಲ ದಿನಗಳಲ್ಲಿ ಮಾನವ ಶ್ರಮದಿಂದ ಜಲಪಾತ ಪ್ರದೇಶದಲ್ಲಿ ಬಿದ್ದಿದ್ದ ಮಣ್ಣು, ಮರಮಟ್ಟುಗಹಳನ್ನು ತೆರವು ಕಾರ್ಯ ನಡೆಸಲಾಯಿತು. ಬಳಿಕ ಕಂಫ್ರೆಷರ್ ಬಳಸಿ ಬಂಡೆಗಳನ್ನು ತೆರವುಗೊಳಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಫೆ.4ರಿಂದ ಜಲಪಾತಕ್ಕೆ ಹೋಗುವ ಕಾಡುದಾರಿಯಲ್ಲಿ ಜೆಸಿಬಿಯ ಮೂಲಕ ರಸ್ತೆಯನ್ನು ನಿರ್ಮಿಸಿ ಜೆಸಿಬಿಯ ಮೂಲಕ ಒಂದು ವಾರ ಮಣ್ಣು, ಬಂಡೆ ತೆರೆಯುವ ಕಾರ್ಯಾಚರಣೆ ನಡೆಸಲಾಗಿತ್ತು. ನಂತರ ಜಿಲ್ಲಾಧಿಕಾರಿಯವರು ಭೇಟಿ ನೀಡಿ, ಎರಡು ದಿನ ಕಾರ್ಯಾಚರಣೆ ಸ್ಥಗಿತಗೊಳಿಸಿದ ಬಳಿಕ ಹಿಟಾಚಿ ಮೂಲಕ ಕಾರ್ಯಾಚರಣೆ ಆರಂಭಿಸಿದ್ದು, ದೊಡ್ಡ ಬಂಡೆಗಳ ತೆರವುಗೊಳಿಸಿದ ಬಳಿಕ ಫೆ.16ರಂದು ಸಂಜೆ ಸುಮಾರು 4.30ರ ವೇಳೆಗೆ ನಾಪತ್ತೆಯಾದ ಸನತ್ ಶೆಟ್ಟಿಯ ಶವ ಪತ್ತೆಯಾಗಿದೆ.


ಜನಪ್ರತಿನಿಧಿ, ಅಧಿಕಾರಿಗಳ ಭೇಟಿ:
ಸ್ಥಳಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್, ಮಾಜಿ ಶಾಸಕ ಕೆ. ವಸಂತ ಬಂಗೇರ, ದ.ಕ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ, ಎಸ್.ಪಿ ಲಕ್ಷ್ಮೀಪ್ರಸಾದ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ, ಎಸ್.ಐ ನಂದಕುಮಾರ್, ಪ್ರಭಾರ ತಹಶೀಲ್ದಾರ್ ರಮೇಶ್ ಬಾಬು, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ ಮೊದಲಾದವರು ಭೇಟಿ ನೀಡಿದ್ದರು.
ದುಃಖತಪ್ತ ಕುಟುಂಬ:
ಸನತ್ ಶೆಟ್ಟಿ ಮತ್ತೆ ಬರುವನೆಂಬ ಆಶಾಭಾವನೆಯಿಂದ ನೋವನ್ನು ನುಂಗಿ ಕುಳಿತ್ತಿದ್ದ ಅವರ ಕುಟುಂಬ ಈಗ ದುಃಖತಪ್ತವಾಗಿದ್ದು, ಮನೆ ಮಂದಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಸಂಜೆ ದೊರೆತ ಮೃತದೇಹವನ್ನುಬೆಳ್ತಂಗಡಿಗೆ ತಂದು ನಂತರ ಮನೆಯವರಿಗೆ ಹಸ್ತಾಂತರಿಸಲಾಯಿತು. ಸನತ್ ಶೆಟ್ಟಿ ಮಣ್ಣಿನಡಿ ಸಿಲುಕಿ ನಾಪತ್ತೆಯಾದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದರಂತೆ ಹರಡುತ್ತಿದ್ದ ವದಂತಿಗಳಿಗೆ ಅವರ ಮೃತದೇಹ ಮಣ್ಣಿನಡಿ ದೊರೆತ ಬಳಿಕ ತೆರೆಬಿದ್ದಿದೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.