ಮಾಲಾಡಿ: ಮಾಲಾಡಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಶ್ರೀಮತಿ ಬೇಬಿ ಸುಜಾನ್ ಹಾಗೂ ಉಪಾಧ್ಯಕ್ಷರಾಗಿ ದಿನೇಶ್ ಕರ್ಕೇರ ಆಯ್ಕೆಯಾಗಿದ್ದಾರೆ.
ಮಾಲಾಡಿ ಗ್ರಾ.ಪಂನ ಒಟ್ಟು 18 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿರು, 9 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಹಾಗೂ ಪಕ್ಷೇತರ ಅಭ್ಯರ್ಥಿ-1ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದರು.
ಫೆ.15ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗ ಸೋಣಂದೂರು 1ನೇ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಸ್ಪರ್ಧಿಸಿ ಚುನಾಯಿತರಾದ ಬೇಬಿ ಸುಜಾನ್ ರವರು ಬಿಜೆಪಿ ಬೆಂಬಲದಿಂದ ಸಾಮಾನ್ಯ ಮಹಿಳೆ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದರೆ, ಇವರಿಗೆ ಪ್ರತಿಸ್ಪರ್ಧಿಯಾಗಿ ಮಾಲಾಡಿ 4ನೇ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತರಾಗಿ ಚುನಾಯಿತರಾದ ವಿದ್ಯಾ ಪಿ ಸಾಲ್ಯಾನ್ ರವರು ನಾಮಪತ್ರ ಸಲ್ಲಿಸಿದ್ದರು.
ಅದೇ ರೀತಿ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿ ಸೋಣಂದೂರು 2 ನೇ ಕ್ಷೇತ್ರದಿಂದ ಚುನಾಯಿತರಾಗಿದ್ದ ದಿನೇಶ್ ಕರ್ಕೇರಾ ನಾಮಪತ್ರ ಸಲ್ಲಿಸಿದ್ದು, ಇವರಿಗೆ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್ ಬೆಂಬಲಿತರಾಗಿ ಮಾಲಾಡಿ 1ನೇ ವಾರ್ಡಿನಿಂದ ಚುನಾಯಿತರಾಗಿದ್ದ ಬೆನೆಡಿಕ್ಟ್ ಮಿರಾಂದಾ ನಾಮಪತ್ರ ಸಲ್ಲಿಸಿದರು.
ಚುನಾವಣಾಧಿಕಾರಿ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ರವರು ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 2 ನಾಮಪತ್ರ ಸಲ್ಲಿಕೆ ಯಾಗಿದ್ದರಿಂದ ಚುನಾವಣೆಯನ್ನು ನಡೆಸಿದರು.
ಚುನಾವಣೆಯಲ್ಲಿ ಮತ ಎಣಿಕೆ ನಡೆದು ಬೇಬಿ ಸುಜಾನ್ ರವರು 9 ಮತಗಳನ್ನು ಪಡೆದುಕೊಂಡು ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ವಿದ್ಯಾ ಪಿ ಸಾಲಿಯಾನ್ ರವರು ೭ ಮತಗಳನ್ನು ಪಡೆಯಲಷ್ಟೇ ಶಕ್ತರಾದರು.
ಉಪಾಧ್ಯಕ್ಷೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ದಿನೇಶ್ ಕರ್ಕೇರಾ 9 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಚುನಾಯಿತರಾದರೆ, ಇವರ ಪ್ರತಿಸ್ಪರ್ಧಿ ಬೆನೆಡಿಕ್ಟ್ ಮಿರಾಂದಾ 7ಮತಗಳನ್ನು ಪಡೆದು ಪರಾಭವಗೊಂಡರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಪಾಟೀಲ್, ಕಾರ್ಯದರ್ಶಿ ಯಶೋಧರ ಶೆಟ್ಟಿ, ಪಂಚಾಯತ್ನ ನೂತನ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಆಯ್ಕೆ ಚುನಾವಣೆಗೆ ಪಕ್ಷೇತರ ಸದಸ್ಯ ಪುನೀತ್ ಕುಮಾರ್ ಹಾಗೂ ಕಾಂಗ್ರೆಸ್ ಬೆಂಬಲಿತ ಸದಸ್ಯ ವಸಂತ ಪೂಜಾರಿ ಗೈರು ಹಾಜರಾಗಿದ್ದರು.