ಬೆಳ್ತಂಗಡಿ: ಕರ್ನಾಟಕ ಸರ್ಕಾರ, ತೋಟಗಾರಿಕಾ ಇಲಾಖೆ ,ಜಿಲ್ಲಾ ಪಂಚಾಯತ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ತಾಲೂಕು ಪರಿಶಿಷ್ಟ ವರ್ಗ ವಿವಿದ್ದೊದ್ದೇಶ ಸಹಕಾರಿ ಸಂಘ(ನಿ) ಲ್ಯಾಂಪ್ಸ್ ಬೆಳ್ತಂಗಡಿ ಇದರ ಸಂಯುಕ್ತ ಆಶ್ರಯದಲ್ಲಿ ರೈತ ತರಬೇತಿ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಶಿರ್ಲಾಲು ಗ್ರಾಮ ಪಂಚಾಯತ್ ವಠಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕುರಿತು ರೈತರಿಗೆ ತರಬೇತಿ ಶಿಬಿರ ಮತ್ತು ಪ್ರಾತ್ಯಕ್ಷತೆ ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿ ಶ್ರೀ ಶ್ಯಾಮ ಭಟ್ ಜೇನು ಕೃಷಿ ಕ್ರಮದ ಕುರಿತು ಮಾಹಿತಿ ರವಾನಿಸುವದರೊಂದಿಗೆ, ಪ್ರಾಯೋಗಿಕವಾಗಿ ವಾಸ್ತವ ವಿಷಯವನ್ನು ಮನದಟ್ಟು ರೈತರಿಗೆ ಮಾಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾ. ಪಂ. ಸದಸ್ಯೆ ಶ್ರೀ ಜಯಶೀಲ ಅಧ್ಯಕ್ಷೀಯ ಭಾಷಣ ಮಾಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಲ್ಯಾಂಪ್ಸ್ ಸಂಘ ಸಂಸ್ಥೆಯ ಅಧ್ಯಕ್ಷ ಲಿಂಗಪ್ಪ ನಾಯ್ಕ ಉರುವಾಲು ಲ್ಯಾಂಪ್ಸ್ ಸಹಕಾರಿ ಸಂಘದ ಬಗ್ಗೆ ಮಾಹಿತಿ ನೀಡುವುದರೊಂದಿಗೆ ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಲಭ್ಯವಿರುವ ನಂದಗೋಕುಲ ಸರ್ಕಾರದ ಯೋಜನೆಯ ಬಗ್ಗೆ ವಿವರಣೆ ನೀಡಿದರು.
ಶಿರ್ಲಾಲು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜು, ಗ್ರಾಮ ಪಂಚಾಯತ್ ನಲ್ಲಿ ಲಭ್ಯವಿರುವ ಸರ್ಕಾರದ ಯೋಜನೆಯಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳಿಗೆ ಮಂಜೂರಾದ ಮನೆಗಳು ಸಂಪೂರ್ಣಗೊಳ್ಳದೆ ನಿಷ್ಕ್ರಿಯಾಗಿವೆ. ಆದರೆ ಲ್ಯಾಂಪ್ಸ್ ಸಹಕಾರಿ ಸಂಘ ಅದರ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದು, ನಂದಗೋಕುಲ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವ ಕೆಲಸ ಮಾಡುತ್ತಿದೆ. ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಲ್ಯಾಂಪ್ಸ್ ಸಹಕಾರಿ ಸಂಘದ ಯೋಜನೆ ಬಹಳ ಪ್ರಯೋಜನಕಾರಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್ ತೋಟಗಾರಿಕಾ ಇಲಾಖೆಯಲ್ಲಿ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಉಮೇಶ್ ನಾಯ್ಕ ಮತ್ತು ಶೀನಪ್ಪ ಮಲೆಕುಡಿಯ ಉಪಸ್ಧಿತರಿದ್ದರು.