ನಾರಾವಿ: ನಾರಾವಿ ಗ್ರಾಮ ಪಂಚಾಯತದ ನೂತನ ಅಧ್ಯಕ್ಷರಾಗಿ ಶ್ರೀಮತಿ ಆಶಾಲತಾ ಎಂ. ಹಾಗೂ ಉಪಾಧ್ಯಕ್ಷರಾಗಿ ಉದಯ ಹೆಗ್ಡೆ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾರಾವಿ ಗ್ರಾಮ ಪಂಚಾಯತದಲ್ಲಿ ಅಧ್ಯಕ್ಷ ಗಾದಿಗೆ ಸಾಮಾನ್ಯ ಮಹಿಳೆ ಮೀಸಲಾತಿ ನಿಗದಿಯಾಗಿದ್ದು, ಕುತ್ಲೂರು 2ನೇ ವಾರ್ಡ್ನಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಆಶಾಲತಾ ಎಂ ಅಧ್ಯಕ್ಷ ಸ್ಥಾನಕ್ಕೆ ಹಾಗೂ ನಾರಾವಿ 4ನೇ ವಾರ್ಡಿನಲ್ಲಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಉದಯ ಹೆಗ್ಡೆ ರವರು ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿ ಅವಿರೊಧವಾಗಿ ಆಯ್ಕೆಯಾಗಿದ್ದಾರೆ.
ನಾರಾವಿ ಗ್ರಾ.ಪಂನಲ್ಲಿ ಫೆ.12 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶಂಕರ್ ಚುನಾವಣಾಧಿಕಾರಿಯಾಗಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರವಿ ಎಸ್.ಎಂ, ಗ್ರಾ.ಪಂ ನೂತನ ಸದಸ್ಯರು, ಗ್ರಾ.ಪಂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಾರಾವಿ ಗ್ರಾಮ ಪಂಚಾಯತದ ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳನ್ನು ಪಡೆದ ಬಿಜೆಪಿ ಬೆಂಬಲಿತರು ಅಧಿಕಾರ ಪಡೆಯುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್ ಬೆಂಬಲಿತರು-4 ಸ್ಥಾನಗಳನ್ನಷ್ಟೆ ಪಡೆದುಕೊಂಡಿದ್ದರು.