ಮಚ್ಚಿನ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಚಂದ್ರಕಾಂತ ನಿಡ್ಡಾಜೆ ಅವರು ಚುನಾಯಿತರಾಗಿದ್ದು, ಉಪಾಧ್ಯಕ್ಷೆಯಾಗಿ ಡೀಕಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಚ್ಚಿನ ಗ್ರಾ.ಪಂನಲ್ಲಿ 14 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.
ಫೆ.12 ರಂದು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಾಗ ಬಿಜೆಪಿ ಪಕ್ಷದಿಂದ ಅಧಿಕೃತವಾಗಿ ಘೋಷಣೆಯಾಗಿದ್ದ ಅಭ್ಯರ್ಥಿ ಚಂದ್ರಶೇಖರ ಬಿ.ಎಸ್ ಅವರು ನಾಮಪತ್ರ ಸಲ್ಲಿಸಿದರೆ, ಇದೇ ಪಕ್ಷ ಬೆಂಬಲದಿಂದ ಆಯ್ಕೆಯಾಗಿದ್ದ ಸದಸ್ಯರಾದ ಚಂದ್ರಕಾಂತ್ ನಿಡ್ಡಾಜೆ ಮತ್ತು ಪ್ರಮೋದ್ ಕುಮಾರ್ ಅವರು ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯವಾಗಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾದ ಡೀಕಮ್ಮ ರವರು ನಾಮಪತ್ರ ಸಲ್ಲಿಸಿದರು. ಆದರೆ ಕೊನೆ ಕ್ಷಣದಲ್ಲಿ ಪ್ರಮೋದ್ ಕುಮಾರ್ ರವರು ನಾಮಪತ್ರ ಹಿಂತೆಗೆದುಕೊಂಡರು.
ಚುನಾವಣಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿ ಶೇಷಗಿರಿ ನಾಯಕ್ ರವರು ಚುನಾವಣಾ ಆಯ್ಕೆ ಪ್ರಕ್ರಿಯೆಯನ್ನು ನಡೆಸಿ, ಅಧ್ಯಕ್ಷ ಸ್ಥಾನಕ್ಕೆ ಎರಡು ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣೆಯನ್ನು ನಡೆಸಿದರು.
ಚುನಾವಣೆಯಲ್ಲಿ ಮತ ಎಣಿಕೆ ನಡೆದು ಚಂದ್ರಕಾಂತ ನಿಡ್ಡಾಜೆ ರವರು 10 ಮತಗಳನ್ನು ಪಡೆದುಕೊಂಡು ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಚಂದ್ರಶೇಖರ ಬಿ.ಎಸ್ ಕೇವಲ 4 ಮತಗಳನ್ನು ಪಡೆಯಲಷ್ಟೇ ಶಕ್ತರಾದರು.
ಉಪಾಧ್ಯಕ್ಷೆ ಸ್ಥಾನಕ್ಕೆ ಡೀಕಮ್ಮ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಗಳು ಅವರ ಅವಿರೊಧ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಗೌರಿ ಶಂಕರ್, ಗ್ರಾ.ಪಂ ನೂತನ ಸದಸ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.