ಕೊಯ್ಯೂರು : ಇಲ್ಲಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಇತ್ತೀಚೆಗೆ ಮಂಗಳೂರು ಪ್ರಸಾದ್ ನೇತ್ರಾಲಯ ಸಹಯೋಗದೊಂದಿಗೆ ಸಂಘದ ವಠಾರದಲ್ಲಿ ಜರುಗಿತು.
ದ.ಕ ಹಾಲು ಉತ್ಪಾದಕರ ಒಕ್ಕೂಟ ನಿರ್ದೇಶಕ ಪದ್ಮನಾಭ ಶೆಟ್ಟಿ ಅರ್ಕಜೆ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೊಯ್ಯೂರು ಹಾಲು ಉತ್ಪಾದಕರ ಸಂಘವು ಬಡವರು ಮತ್ತು ಸಂಘದ ಸದಸ್ಯರು ಆರೋಗ್ಯಕರ ಜೀವನ ನಡೆಸಲು ಉಚಿತವಾಗಿ ಕಣ್ಣುಗಳ ಪರೀಕ್ಷೆ ಮತ್ತು ಉಚಿತ ಕನ್ನಡಕ ನೀಡುವ ಮೂಲಕ ಸಮಸ್ಯೆಗಳನ್ನು ಪರಿಹರಿಸಲು ಇಂತಹ ಶಿಬಿರದಿಂದ ಜನರಿಗೆ ಪ್ರೋತ್ಸಾಹ ನೀಡುವುದು ಶ್ಲಾಘನೀಯ ಎಂದು ಹೇಳಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಸಾದ್ ನೇತ್ರಾಲಯದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಡಾ| ಫರ್ಹಿನ್ ಸನಾ ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಸಯ್ಯದ್ ಮಕ್ಬಲ್ ಮತ್ತು ಸಿಬ್ಬಂದಿಗಳು ಕಣ್ಣುಗಳನ್ನು ಪರೀಕ್ಷಿಸಿದರು. ಸಂಘದ ಅಧ್ಯಕ್ಷ ಕೃಷ್ಣ ಭಟ್ ಉಚಿತ ಕನ್ನಡಕವನ್ನು ನೀಡಿದರು.ಉಪಾಧ್ಯಕ್ಷ ಮೋಹನ ಗೌಡ ಪಾಂಬೇಲು, ನಿರ್ದೇಶಕರಾದ ದಿನೇಶ್ ಗೌಡ ದೆಂತ್ಯಾರು, ವೆಂಕಪ್ಪ ಗೌಡ ಜೆ,ಗೋಪಾಲಕೃಷ್ಣ ಗೌಡ, ಚಂದ್ರಶೇಖರ ಗೌಡ, ಉಮೇಶ್ ,ಅನಿಲ್ ಕುಮಾರ್, ಎನ್.ರಾಜು, ಮೋಹಿನಿ ಟಿ, ವನಿತಾ, ಸಂಘದ ಕಾರ್ಯದರ್ಶಿ ಶಿಲ್ಪಾ ಡಿ.ಪೂಜಾರಿ, ಹಾಲು ಪರೀಕ್ಷಕಿ ಶಶಿಕಲಾ, ಗುಮಾಸ್ತೆ ವೇದಾವತಿ, ಬಿ.ಎಮ್.ಸಿ.ನಿರ್ವಾಹಕ ನಾರಾಯಣ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಕೊಯ್ಯೂರು ಪಂಚಾಯತು ಮಾಜಿ ಅಧ್ಯಕ್ಷರು, ಸದಸ್ಯರು, ಹಾಲಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.