ಬೆಳ್ತಂಗಡಿ: ತುಳುನಾಡಿನಾದ್ಯಂತ ಸರ್ವ ಜಾತಿ ಜನಾಂಗದವರು ಆರಾಧಿಸಿಕೊಂಡು ಬರುತ್ತಿರುವ ಅವಳಿ ವೀರ ಪುರುಷರಾದ ಕೋಟಿ ಚೆನ್ನಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಮೂಡಬಿದಿರೆಯ ರಾಜಕಾರಣಿ ಜಗದೀಶ್ ಅಧಿಕಾರಿಯ ಅತಿರೇಕದ ವರ್ತನೆಯನ್ನು ಶ್ರೀ ಬ್ರಹ್ಮಬೈದರ್ಕಳ ಗರಡಿ ಶಿರ್ಲಾಲು ಇದರ ಜಾತ್ರಾ ಮಹೋತ್ಸವದ ಅಧ್ಯಕ್ಷ ಹಾಗೂ ಯುವವಾಹಿನಿ ತಾಲೂಕು ಘಟಕದ ಅಧ್ಯಕ್ಷ ಎಂ.ಕೆ ಪ್ರಸಾದ್ ಖಂಡಿಸಿದ್ದಾರೆ.
ಅನ್ಯಾಯ, ಅಧರ್ಮ, ಅಸಮಾನತೆಯ ವಿರುದ್ಧ ಸಿಡಿದೆದ್ದು ವೀರ ಮರಣ ಹೊಂದಿ ಕಾರಣಿಕ ಪುರುಷರು ಎಂದು ಆರಾಧಿಸುವ ಕೋಟಿ ಚೆನ್ನಯ್ಯ ಭಕ್ತರು ತುಳುನಾಡಿನಾದ್ಯಂತ ಅಸಂಖ್ಯಾತ ಸಂಖ್ಯೆಯಲ್ಲಿ ಇಂದಿಗೂ ಇರುವುದಾದರೆ ಅದಕ್ಕೆ ಕಾರಣ ಕೋಟಿ ಚೆನ್ನಯರಲ್ಲಿದ್ದ ದೈವತ್ವದ ಗುಣಗಳು.
ಇಂತಹ ದೇವ ಮಾನವರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡುವ ಅವರು ಕೋಟಿ ಚೆನ್ನಯರ ನೈಜ ಇತಿಹಾಸವನ್ನು ತಿರುಚುವ ಷಡ್ಯಂತ್ರಕ್ಕೆ ಕೈ ಹಾಕಿದ್ದಾರೆಯೇ? ಎನ್ನುವ ಅನುಮಾನ ಭಕ್ತ ಸಮೂಹದಲ್ಲಿ ಮೂಡುತ್ತಿದೆ. ಮಾತ್ರವಲ್ಲದೇ ಹಿಂದೂ ಧರ್ಮದ ಧಾರ್ಮಿಕ ನಂಬಿಕೆಗೆ ಅಪಮಾನ ಮಾಡಲಾಗಿದೆ.
ತುಳುನಾಡಿನಲ್ಲಿ ಮಾತ್ರವಲ್ಲದೆ ರಾಜ್ಯ ಪರರಾಜ್ಯಗಳಲ್ಲಿಯೂ ಕೋಟಿ ಚೆನ್ನಯರ ಗರಡಿಗಳಿದ್ದು, ಬಿಲ್ಲವರು ಸೇರಿದಂತೆ ಬಂಟರು, ಜೈನರು ಹಾಗೂ ಇತರ ಸಮುದಾಯದವರು ಕೂಡ ಆರಾಧಿಸಿಕೊಂಡು ಬರುತ್ತಿದ್ದಾರೆ. ಇಂತಹ ಪುಣ್ಯ ಪುರುಷರ ಅಪಮಾನ ಮಾಡಿದ ಜಗದೀಶ್ ಅಧಿಕಾರಿಯವರು ಈ ಕೂಡಲೆ ಭಕ್ತ ಸಮೂಹದಲ್ಲಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.