ಉಜಿರೆ: ಕಳೆದ 11 ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಬಂಗಾರ ಪಲ್ಕೆ ಜಲಪಾತದ ಸಮೀಪ ಗುಡ್ಡ ಕುಸಿದು ನಾಪತ್ತೆಯಾಗಿರುವ ಉಜಿರೆ ಸಮೀಪದ ಕಾಶಿಬೆಟ್ಟಿನ ಸನತ್ ಶೆಟ್ಟಿ(20)ಯ ಶೋಧಕ್ಕೆ ಫೆ.4 ರಂದು ಜೆಸಿಬಿ ಬಳಸಿ ಕಾರ್ಯಾಚರಣೆ ನಡೆಸಲಾಗಿದೆ. ಪ್ರಕರಣ ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇದೀಗ ಈ ಪ್ರಕರಣದ ಬಗ್ಗೆ ಹಲವಾರು ವದಂತಿಗಳು ಹರಡತೊಡಗಿದೆ.
ಬಂಗಾರ ಪಲ್ಕೆಯ ಜಲಪಾತದ ದುರ್ಗಮ ಪ್ರದೇಶಕ್ಕೆ ಸುಮಾರು 333 ಮೀ.ನಷ್ಟು ರಸ್ತೆಯನ್ನು ನಿರ್ಮಿಸುವ ಕಾರ್ಯ ಫೆ.3ರಿಂದ ಆರಂಭವಾಗಿತ್ತು. ಫೆ.4 ರಂದು ಮಧ್ಯಾಹ್ನದಿಂದ ಜೆಸಿಬಿಯು ಗುಡ್ಡ ಕುಸಿತ ಸ್ಥಳಕ್ಕೆ ಬಂದಿದ್ದು, ಬಾಕಿ ಇರುವ ಮಣ್ಣು ಹಾಗೂ ಕಲ್ಲುಗಳನ್ನು ತೆರವುಗೊಳಿಸಲಾಗುತ್ತಿದೆ. ಸದ್ಯ ಜಲಪಾತದ ಸುಮಾರು 500 ಚದರ ಅಡಿ ಪ್ರದೇಶದಲ್ಲಿ ಶೋಧ ಕಾರ್ಯ ನಡೆಯಲಿದೆ.
ಕಳೆದ ವಾರಕ್ಕೆ ಹೋಲಿಸಿದರೆ ಪ್ರಕರಣ ನಡೆದ ಸ್ಥಳದ ಚಿತ್ರಣ ಈಗ ಸಂಪೂರ್ಣ ಬದಲಾಗಿದೆ. ಘಟನಾ ಸ್ಥಳಕ್ಕೆ ತೆರಳಲು ರಸ್ತೆ ಸಮಸ್ಯೆ ಬಗೆಹರಿದಿದೆ, ಬಂಡೆಕಲ್ಲು, ಮರಮಟ್ಟುಗಳನ್ನು ಬಹುತೇಕ ತೆರವುಗೊಳಿಸಲಾಗಿದೆ. ಜಲಪಾತ ಪ್ರದೇಶದ ದಾರಿಯಲ್ಲಿದ್ದ ಏರುಪೇರುಗಳನ್ನು ಸಮತಟ್ಟುಗೊಳಿಸಿಸಲಾಗಿದೆ. ಜೆಸಿಬಿ ಮೂಲಕ ತೆರವುಗೊಳ್ಳುತ್ತಿರುವ ಮಣ್ಣಿನಡಿ ಸಾಕಷ್ಟು ಗಿಡಗಂಟಿ,ಸಾಮಾನ್ಯ ಗಾತ್ರದ ಕಲ್ಲುಗಳು ಕಂಡುಬರುತ್ತಿವೆ. ಜಲಪಾತದ ನೀರು ತೆರವುಗೊಂಡ ಕಲ್ಲುಗಳ ಬುಡಭಾಗದಲ್ಲಿ ಹರಿಯುತ್ತಿದ್ದು ಶೋಧ ಕಾರ್ಯಕ್ಕೆ ಜಲಪಾತದ ನೀರು ಯಾವುದೇ ಸಮಸ್ಯೆಯುಂಟುಮಾಡುತ್ತಿಲ್ಲ. ಇದರಿಂದ ಶೋಧ ಕಾರ್ಯಕ್ಕೆ ಇನ್ನಷ್ಟು ವೇಗ ಸಿಕ್ಕಿದೆ.
ಕಳೆದ 11ದಿನಗಳಿಂದ ನಡೆಯುತ್ತಿರುವ ಶೋಧಕಾರ್ಯದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದು 30 ಅಡಿ ಆಳದವರೆಗೆ ಮಣ್ಣು, ಕಲ್ಲು ತೆರವು ಕೆಲಸ ನಡೆದಿದ್ದರೂ ಇದುವರೆಗೂ ನಾಪತ್ತೆಯಾದ ವ್ಯಕ್ತಿಯಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ದುರಂತದ ಬಗ್ಗೆ ದಿನಕ್ಕೊಂದರಂತೆ ವದಂತಿಗಳು ಹಬ್ಬುತ್ತಿದೆ.
ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಐ ನಂದಕುಮಾರ್ ನೇತೃತ್ವದಲ್ಲಿ ಪೊಲೀಸ್ ಇಲಾಖೆ, ಎಸ್ ಡಿ ಆರ್ ಎಪ್, ,ಅಗ್ನಿಶಾಮಕದಳ, ವನ್ಯಜೀವಿ ವಿಭಾಗ ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಶೋಧ ಕಾರ್ಯಕ್ಕೆ ನೆರವು ನೀಡುತ್ತಿದ್ದಾರೆ.ಸ್ಥಳದಲ್ಲಿ ಜನರೇಟರ್, ಟ್ರ್ಯಾಕ್ಟರ್ ಕಂಪ್ರೆಸರ್, ತುರ್ತು ಅಗತ್ಯದ ವಾಹನಗಳನ್ನು ಸನ್ನದ್ಧಸ್ಥಿತಿಯಲ್ಲಿ ಇರಿಸಲಾಗಿದೆ.
ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ. ದೂರದಲ್ಲಿರುವ ಈ ಪ್ರದೇಶಕ್ಕೆ ಮಲವಂತಿಗೆ ಗ್ರಾಮದ ದಿಡುಪೆ ಯಿಂದ ೧೨ ಕಿ.ಮೀ. ವನ್ಯಜೀವಿ ವಿಭಾಗದ ದುರ್ಗಮ ರಸ್ತೆಯಲ್ಲಿ ಸಾಗಬೇಕು. ಜೀಪುಗಳಲ್ಲಿ ತೆರಳುವುದು ಉತ್ತಮ.ಅತ್ಯಂತ ಕಡಿದಾದ, ಭಾರಿ ಪ್ರಮಾಣದ ಏರು ತಗ್ಗು, ಸಣ್ಣಪ್ರಮಾಣದ ಕಲ್ಲುಗಳನ್ನು ಹೊಂದಿರುವ,ನಾಲ್ಕಾರು ಹಳ್ಳಗಳನ್ನು ದಾಟ ಬೇಕಾಗಿರುವ,ವಿಪರೀತ ಧೂಳಿನಿಂದ ಕೂಡಿರುವ, ಕೆಲವೊಮ್ಮೆ ಕಾಡಾನೆಗಳು ಕಂಡುಬರುವ ಈ ದಾರಿಯಲ್ಲಿ ವಾಹನ ಮೂಲಕ,ಪ್ರಕರಣ ನಡೆದ ಸ್ಥಳಕ್ಕೆ ತೆರಳಲು ಒಂದು ಗಂಟೆಗಿಂತ ಅಧಿಕ ಅವಧಿ ಬೇಕಾಗುತ್ತದೆ.ಪ್ರತಿದಿನ ಈ ದುರ್ಗಮ ಹಾದಿಯನ್ನು ಕ್ರಮಿಸಿ ಕಾರ್ಯಾಚರಣೆ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ.