ಓಡಿಲ್ನಾಳ: ಇಲ್ಲಿಯ ಶ್ರೀ ಕ್ಷೇತ್ರ ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಇದರ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮತ್ತು ಮಾಜಿ ಶಾಸಕ ಹಾಗೂ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ. ವಸಂತ ಬಂಗೇರ ರವರು ಫೆ.4 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರಿಗೆ ಮನವಿ ನೀಡಿದರು.
ಮನವಿಯನ್ನು ಪರಿಶೀಲಿಸಿದ ಸಿ.ಎಂ ಯಡಿಯೂರಪ್ಪ ರವರು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯಕ್ಕೆ ರೂ. 50ಲಕ್ಷ ಅನುದಾನ ಮಂಜೂರು ಮಾಡಿ ಆದೇಶ ಹೊರಡಿಸಿದ್ದಾರೆ.
ಕಳೆದ ಜ.28 ರಂದು ಮೈರಲ್ಕೆ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿ ಮತ್ತು ತೀರ್ಥ ಮಂಟಪದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕರು ಸರಕಾರದ ವತಿಯಿಂದ ಗರಿಷ್ಠ ಅನುದಾನ ಮಂಜೂರಾತಿಗೆ ಪ್ರಯತ್ನಿಸುವುದಾಗಿ ತಿಳಿಸಿ, “ನಾನೂ, ನೀವು ಜೊತೆಯಲ್ಲೇ ಬೆಂಗಳೂರಿಗೆ ತೆರಳಿ ಸಿ.ಎಂ ಬಿ.ಎಸ್ ಯಡಿಯೂರಪ್ಪ ರವರಲ್ಲಿ ಮನವಿ ಮಾಡೋಣ” ಎಂದು ಮಾಜಿ ಶಾಸಕ ವಸಂತ ಬಂಗೇರ ರವರನ್ನು ಆಹ್ವಾನಿಸಿದ್ದರು.
ಅದರಂತೆ ಇಬ್ಬರೂ ಜೊತೆಯಾಗಿ ಫೆ.4 ರಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚುವರಿ ಅನುದಾನ ಒದಗಿಸುವಂತೆ ಕೋರಿ ಮನವಿ ನೀಡಿದ್ದಾರೆ.