ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘ, ದ.ಕ ಜಿಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘ, ಸಾರಿಗೆ ಕಾರ್ಮಿಕರ ಸಂಘ, ಪ್ರಾಂತ ರೈತ ಸಂಘ ತಾಲೂಕು ಸಮಿತಿ, ಕರ್ನಾಟಕ ರಾಜ್ಯ ಋಣ ಮುಕ್ತ ಹೋರಾಟ ತಾಲೂಕು ಸಮಿತಿ ವತಿಯಿಂದ ಪೆಟ್ರೋಲ್, ಡೀಸಿಲ್ ದರ ಏರಿಕೆ, ಕೇಂದ್ರ ಸರಕಾರ ಮಂಡಿಸಿದ 2021-22ನೇ ಸಾಲಿನ ಜನ ವಿರೋಧಿ ಬಜೆಟ್ ತಿರಸ್ಕರಿಸಲು ಒತ್ತಾಯಿಸಿ ತಾಲೂಕು ಮಿನಿ ವಿಧಾನಸೌಧದ ಎದುರು ಫೆ.2 ರಂದು ಪ್ರತಿಭಟನೆ ನಡೆಯಿತು.
ಕೇಂದ್ರ ಸರಕಾರ ಮಂಡಿಸಿದ 2021-22 ನೇ ಸಾಲಿನ ಬಜೆಟ್ ಜನ ವಿರೋಧಿ ಬಜೆಟ್ಟಾಗಿದ್ದು ಇದನ್ನು ತಿರಸ್ಕರಿಸುವುದು ಅನಿವಾರ್ಯವಾಗಿದೆ. ದೇಶದ ಸಾರ್ವಜನಿಕೆ ಸಂಸ್ಥೆಗಳ ಮಾರಾಟ ಮಾಡಲು ಅವಕಾಶ ನೀಡಿದ ಈ ಬಜೆಟ್ ಬ್ಯಾಂಕ್, ಎಲ್.ಐ.ಸಿ. ಗಳಲ್ಲೂ ವಿದೇಶಿ ಬಂಡವಾಳ ಹೂಡಲು ಅವಕಾಶ ಕಲ್ಪಿಸಿದ್ದು, ಅಗತ್ಯ ವಸ್ತುಗಳ ದರ ಏರಿಕೆಗೆ ಅನುವು ಮಾಡಿಕೊಡುವ ರೀತಿ ಪೆಟ್ರೋಲ್, ಡೀಸೆಲ್ ದರವನ್ನು ದುಬಾರಿಯಾಗಿ ಏರಿಸಿ ಬದುಕಿಗೆ ಸಂಚಕಾರವನ್ನು ತಂದೊಡ್ಡಿದೆ.
ಉದ್ಯೋಗ ಸೃಷ್ಠಿಗೆ ಆದ್ಯತೆ ನೀಡದ ಈ ಬಜೆಟ್ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕಡಿತಗೊಳಿಸಿ ಗ್ರಾಮೀಣ ಜನರ ಉದ್ಯೋಗವನ್ನು ಕಡಿತ ಮಾಡಿದೆ. ಕೃಷಿ ಉಪಕರಣಗಳ, ರಾಸಾಯನಿಕ ಗೊಬ್ಬರಗಳ, ಪೈಪ್ಸ್ ದರ ಏರಿಕೆ ಮಾಡಿ ಕೃಷಿಕರಿಗೆ, ರೈತರಿಗೆ ಅನ್ಯಾಯ ಮಾಡಿದೆ. ಇಂತಹ ಹಲವು ಕಾರಣಗಳಿಂದ ಬಜೆಟ್ ಸರಕಾರದ ಜನವಿರೋಧಿ, ರೈತ ವಿರೋಧಿ, ಕಾರ್ಮಿಕ ವಿರೋಧಿ ಬಜೆಟಾಗಿದೆ. ಕೇಂದ್ರ ಸರಕಾರ ಮಂಡಿಸಿದ ಈ ಜನ ವಿರೋಧಿ ಬಜೆಟ್ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹಾಗೂ ನ್ಯಾಯವಾದಿ ಬಿ. ಎಂ ಭಟ್, ಕಾರ್ಮಿಕ ಸಂಘಟನೆಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.