ವೇಣೂರು: ಕರಿಮಣೇಲು ಗ್ರಾಮದ ಬೋಳೂರು ಪರಿಸರದಲ್ಲಿ ಹಾಡಹಗಲೇ ದನವನ್ನು ಚಿರತೆ ಬಲಿ ಪಡೆದುಕೊಂಡಿದ್ದು, ಜನ ಭಯಭೀತರಾಗಿದ್ದಾರೆ.
ಬೋಳೂರು ಪಡ್ಲ ನಿವಾಸಿ ವೀರಪ್ಪ ಪೂಜಾರಿ ಅವರು ತನ್ನ ದನವನ್ನು ಜ.31 ರಂದು ಮನೆ ಸಮೀಪದ ಪ್ರದೇಶದಲ್ಲಿ ಮೇಯಲು ಬಿಟ್ಟಿದ್ದರು. ಸಂಜೆಯಾದರೂ ದನವು ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಹುಡುಕಾಟ ನಡೆಸಿದ್ದರು. ಫೆ.1 ರಂದು ಮನೆ ಸಮೀಪದ ಗುಡ್ಡದಲ್ಲಿ ತಿಂದುಳಿದ ದನದ ಮೃತದೇಹ ಪತ್ತೆಯಾಗಿದೆ.
ಹಲವು ಸಮಯಗಳ ಹಿಂದೆ ಇದೇ ಪರಿಸರದಲ್ಲಿ ನಾಯಿ, ದನಗಳನ್ನು ಬಲಿ ಪಡೆದುಕೊಂಡಿದ್ದ ಚಿರತೆ ಮತ್ತೆ ಕಾಣಿಸಿಕೊಂಡಿರಲಿಲ್ಲ. ಇದೀಗ ಮತ್ತೆ ಜನರಲ್ಲಿ ಭಯ ಮೂಡಿದೆ. ವೇಣೂರು ಅರಣ್ಯ ಅಧಿಕಾರಿ ಇಲಾಖೆಗೆ ದೂರು ನೀಡಲಾಗಿದೆ. ಬೋನ್ ಅಳವಡಿಸಬೇಕೆಂಬ ಆಗ್ರಹ ಇಲ್ಲಿನ ನಿವಾಸಿಗಳಿಂದ ಕೇಳಿ ಬಂದಿದೆ