ಪೋಲಿಸರ ಕಾರ್ಯಾಚರಣೆ ಬಳಿಕ ಮರಳಿ ಮನೆಗೆ
ಗೇರುಕಟ್ಟೆ : ನಾಳ ಇಲ್ಲಿಯ ಪಿಜಿನುಕ್ಕು ಸಮೀಪದ ಪಲ್ಲಾದೆ ರಸ್ತೆ ಬದಿಯಲ್ಲಿ 70 ವಯೋಮಾನದ ವೃದ್ಧೆ ಲಲಿತಾ ಎಂಬವರು ಮಧ್ಯಾಹ್ನ ಸುಡುವ ಬಿಸಿಲಿನಲ್ಲಿ ಅನಾಥೆಯಾಗಿರುವ ಘಟನೆ ಜ.31 ರಂದು ಕಂಡು ಬಂದಿದೆ.
ಗೇರುಕಟ್ಟೆ ಸಮೀಪದ ನಿವಾಸಿ ಲಲಿತಾ ವೃದ್ಧೆ ತನ್ನ ಮಕ್ಕಳೊಂದಿಗೆ ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ವಾಸಿಸುತ್ತಿದ್ದರು.ಈಕೆ ಕೆಲವು ಸಮಯದಿಂದ ಕಾಲು ನೋವಿನಿಂದ ಬಳಲುತ್ತಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ವಲ್ಪ ಮಟ್ಟಿಗೆ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಕರೆತಂದು ನಾಳ ಸಮೀಪದ ತಂಗಿ ಮನೆಯಲ್ಲಿ ಸೇರಿಸುವ ಪ್ರಯತ್ನ ಮಾಡಿದರು. ಆದರೆ ವೃದ್ಧೆಯ ತಂಗಿ(60 ವರ್ಷ), ತಮ್ಮ(55 ವರ್ಷ) ಅವಿವಾಹಿತರಾಗಿದ್ದು ತಾವು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೃದ್ಧೆಯನ್ನು ಅವರ ಮನೆಯ ಪಕ್ಕದ ರಸ್ತೆ ಬದಿಯಲ್ಲಿ ಸಂಬಂಧಿಕರು ಆಟೋ ರಿಕ್ಷಾದಲ್ಲಿ ತಂದು ಬಿಟ್ಟು ಹೋಗಿದರು. ಇದನ್ನು ಗಮನಿಸಿದ ಸ್ಥಳೀಯರು ದ್ವಿಗ್ರಮೆ ವ್ಯಕ್ತಪಡಿಸಿದರು ಹಾಗೂ ಯುವಕರು ಸಹಾಯವಾಣಿ 112ಕ್ಕೆ ತುರ್ತು ಕರೆ ಮಾಡಿ ಮಾಹಿತಿ ನೀಡಿದರು.
ತಕ್ಷಣ ಸ್ಪಂದಿಸಿದ ಬೆಳ್ತಂಗಡಿ ಆರಕ್ಷಕ ಠಾಣೆ ಹೊಯ್ಸಳ ಪಡೆಯ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ವಿಷಯಕ್ಕೆ ಸಂಬಂಧಿಸಿದ ವೃದ್ಧೆ ಸಂಬಂಧಿಕರನ್ನು ವಿಚಾರಿಸಿದಾಗ ಪುತ್ರಿ ತಿಳಿಸಿದಂತೆ ಮೊಮ್ಮಗಳು ವೃದೆಯನ್ನು ತಂಗಿ ಮನೆಯ ಹತ್ತಿರದಲ್ಲಿ ಬಿಟ್ಟು ಬಂದಿರುವುದಾಗಿ ಒಪ್ಪಿಕೊಂಡರು. ಪೋಲಿಸರು ಮಗಳ ಮತ್ತು ಮೊಮ್ಮಗಳ ಮನವೊಲಿಸಿ ಗೇರುಕಟ್ಟೆ ಸಮೀಪದ ಮನೆಯಲ್ಲಿ ಸೇರಿಸುವಲ್ಲಿ ಯಶಸ್ವಿಯಾದರು.ಹಾಗೂ ಫೆ.೧ರಂದು ಐವರು ಮಕ್ಕಳು ಠಾಣೆ ಬರುವಂತೆ ತಿಳಿಸಿದರು.
ಐವರು ಮಕ್ಕಳಲ್ಲಿ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ಓರ್ವ ಪುತ್ರ ಮಂಗಳೂರು ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಓರ್ವೆ ಕಳಿಯ ಗ್ರಾಮದ ಆಶಾಕಾರ್ಯಕರ್ತೆ, ಇರ್ವರು ಪುತ್ರರು ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದಾರೆ. ಓರ್ವ ಪುತ್ರಿ ತನ್ನ ಪತಿ ಮನೆಯಲ್ಲಿದ್ದಾರೆ. ಈ ಘಟನೆಯಲ್ಲಿ ಪೋಲಿಸ್ ಇಲಾಖೆಯ ಸಿಬ್ಬಂದಿಗಳ ಕಾರ್ಯವೈಖರಿಯ ಬಗ್ಗೆ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾದರು. ವೃದ್ಧೆ ತಾಯಿಯ ಮಕ್ಕಳ ಬಗ್ಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.