ಫೆ.19 ರಿಂದ 28: ಕಾಜೂರು ಉರೂಸ್ ಮಹಾಸಂಭ್ರಮ; ಸರ್ವ ಧರ್ಮೀಯರ ಸೌಹಾರ್ದ ಸಂಗಮ

ಬೆಳ್ತಂಗಡಿ: ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಸಮನ್ವಯ ಕೇಂದ್ರ, ಕಾಜೂರು ದರ್ಗಾ ಶರೀಫ್‌ನಲ್ಲಿ ಪ್ರತಿವರ್ಷ ನಡೆಯುವ ಉರೂಸ್ ಮಹಾಸಂಭ್ರಮವು ಈ ವರ್ಷ ಫೆ.19 ರಿಂದ ಆರಂಭಗೊಂಡು ಫೆ. 28ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳಲಿದೆ ಎಂದು ಕಾಜೂರು ಉರೂಸ್ ಸಮಿತಿ ಅಧ್ಯಕ್ಷ ಕೆ.ಯು ಇಬ್ರಾಹಿಂ ತಿಳಿಸಿದರು.
ಅವರು ಜ.30 ರಂದು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆಯಲಾದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಗೌರವಾಧ್ಯಕ್ಷ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಮತ್ತು ದ.ಕ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಸಯ್ಯಿದ್ ಕೂರತ್ ತಂಙಳ್ ರವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಯ್ಯಿದ್ ಕಾಜೂರು ತಂಙಳ್ ಅಧ್ಯಕ್ಷತೆ ವಹಿಸಲಿದ್ದಾರೆ.
ಫೆ.19ರಂದು ತಾ| ಸುನ್ನೀ ಸಂಯುಕ್ತ ಜಮಾಅತ್ ಸಹಾಯಕ ಖಾಝಿ ಸಯ್ಯಿದ್ ಸಾದಾತ್ ತಂಙಳ್ ಉರೂಸ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಸಯ್ಯಿದ್ ಕೂರತ್ ತಂಙಳ್ ಅಧ್ಯಕ್ಷತೆ ವಹಿಸಿ ದುಆ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಅನೇಕ ಸಯ್ಯಿದರುಗಳು, ಕಾವಳಕಟ್ಟೆ ಹಝ್ರತ್, ಸಹಿತ ಪ್ರಮುಖ ಗಣ್ಯರುಗಳು, ತಾಲೂಕಿನ ಮಸ್ಜಿದ್‌ಗಳ ಅಧ್ಯಕ್ಷರುಗಳು, ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ.
ಉರೂಸ್ ಪ್ರಯುಕ್ತ 10ದಿನಗಳಲ್ಲಿ ಪ್ರತಿದಿನ ರಾತ್ರಿ ಕರ್ನಾಟಕ- ಕೇರಳದ ಪ್ರಸಿದ್ಧ ವಾಗ್ಮಿಗಳಿಂದ ಧಾರ್ಮಿಕ ಪ್ರವಚನ ನಡೆಯಲಿದೆ.
ಫೆ. 25 ರಂದು ಬೃಹತ್ ದಿಕ್ರ್ ಮಜ್ಲಿಸ್ ನಡೆಯಲಿದ್ದು, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಉಸ್ತಾದ್, ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಖಾಝಿ ಮಾಣಿ ಉಸ್ತಾದ್ ಸಹಿತ ಹಲವಾರು ವಿದ್ವಾಂಸರುಗಳು, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಜಿಫ್ರಿ ತಂಙಳ್ ಬೆಳ್ತಂಗಡಿ ಸಹಿತ ಅನೇಕ ಸಯ್ಯಿದರುಗಳು, ಉಲಮಾಗಳು, ಸಾಮಾಜಿಕ ಧಾರ್ಮಿಕ ನಾಯಕರುಗಳು ಭಾಗವಹಿಸಲಿದ್ದಾರೆ.
ಫೆ. 28ರಂದು ಸಂಜೆ ನಡೆಯಲಿರುವ ಸರ್ವಧರ್ಮೀಯರ ಸೌಹಾರ್ದ ಸಮಾರಂಭದ ಅಧ್ಯಕ್ಷತೆಯನ್ನು ಕುಂಬೋಳ್ ತಂಙಳ್ ವಹಿಸಲಿದ್ದಾರೆ. ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸದಸ್ಯ ಎನ್.ಕೆ.ಎಮ್ ಶಾಫಿ ಸಅದಿ ಬೆಂಗಳೂರು, ಡಾ. ಅಬ್ದುಲ್ ರಶೀದ್ ಝೈನಿ ಸಖಾಫಿ ಅಲ್ಲದೆ ಹಲವಾರು ಧಾರ್ಮಿಕ, ರಾಜಕೀಯ, ಸಾಮಾಜಿಕ ನೇತಾರರು ಹಾಗೂ ಕೇಂದ್ರದ, ರಾಜ್ಯದ ಸಚಿವರುಗಳು, ಸಂಸದರು, ಶಾಸಕರುಗಳು ಭಾಗವಹಿಸಲಿದ್ದು, ಒಗ್ಗಟ್ಟಾಗಿ ಎಲ್ಲಾ ಧರ್ಮದವರನ್ನು ಸೇರಿಸಿ ಸರ್ವಧರ್ಮ ಸಭೆಯನ್ನು ನಡೆಸಲಾಗುವುದು.
ರಾತ್ರಿ ಉರೂಸ್ ಸಮಾರೋಪದಲ್ಲಿ ವಿಶ್ವವಿಖ್ಯಾತ ವಾಗ್ಮಿ ಲುಕ್ಮಾನುಲ್ ಹಕೀಮ್ ಸಖಾಫಿ ಪುಲ್ಲಾರ ಮುಖ್ಯ ಪ್ರಭಾಷಣಗೈಯ್ಯಲಿದ್ದು, ಮರ್‌ಹೂಮ್ ಕಾಜೂರು ತಂಙಳ್ ಸಹೋದರ ಸಯ್ಯಿದಲವಿ ಕೋಯ ಜಮಲುಲ್ಲೈಲಿ ತಂಙಳ್ ಕೇರಳ ಭಾಗಿಯಾಗಲಿದ್ದಾರೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಬೆಲ್ಲದ ಗಂಜಿ ವಿತರಣೆ, ಉರೂಸ್ ಕೊನೆಯದಾಗಿ ಸಾರ್ವಜನಿಕರಿಗೆ ಮಹಾ ಅನ್ನದಾನ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಿಲ್ಲೂರು ಆಡಳಿತ ಸಮಿತಿ ಉಪಾಧ್ಯಕ್ಷ ಎಂ ಅಬೂಬಕ್ಕರ್ ಮಲ್ಲಿಗೆಮನೆ, ಉರೂಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಹೆಚ್ ಅಬೂಬಕ್ಕರ್ ಸಿದ್ದೀಕ್ ಕಾಜೂರು, ಜೊತೆ ಕಾರ್ಯದರ್ಶಿ ಎಂ.ಎ ಕಾಸಿಂ ಮಲ್ಲಿಗೆಮನೆ ಕಿಲ್ಲೂರು, ಕೋಶಾಧಿಕಾರಿ ಕೆ.ಯು ಮುಹಮ್ಮದ್ ಕಮಾಲ್ ಕಾಜೂರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.