ಉಜಿರೆ: ಜನರ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಜಾಗೃತಿ ಹಾಗೂ ಆರೋಗ್ಯ ಸೇವೆಯಲ್ಲಿ ತೊಡಗಿಸಿಕೊಂಡವರಲ್ಲಿ ವೃತ್ತಿಪರತೆಯನ್ನು ಹೆಚ್ಚಿಸಲು ಅನುಕೂಲಕರವಾಗಿ ರೂಪಿತವಾದ ಬೆನಕ ಸಭಾಭವನ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ಮಹತ್ತರ ಹೆಜ್ಜೆ ಎಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ ಅವರು ಶ್ಲಾಘಿಸಿದರು. ಹರೀಶ್ ಪೂಂಜ ಅವರು ದೀಪಪ್ರಜ್ವಲನೆ ಮಾಡುವ ಮೂಲಕ ಉಜಿರೆಯ ಬೆನಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಬೆನಕ ಸಭಾಭವನವನ್ನು ಇಂದು ಉದ್ಘಾಟಿನೆ ಮಾಡಿದ್ದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು ಮಾತನಾಡುತ್ತಾ ಆತ್ಮ ನಿರ್ಭರ ಭಾರತದ ಆಶಯ ಸಾಕಾರಗೊಳಿಸುವಲ್ಲಿ ವೃತ್ತಿ ಪರತೆ ಹಾಗೂ ಸಮಾಜಮುಖಿ ಚಿಂತನೆ ಅಗತ್ಯ. ಈ ನಿಟ್ಟಿನಲ್ಲಿ ಮಾನವ ಸಂಪನ್ಮೂಲ ಅಬಿವೃದ್ಧಿಯ ಮೂಲಕ ವೃತ್ತಿಪರತೆಯನ್ನು ಹೆಚ್ಚಿಸುವ ಹಾಗೂ ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಆಶಯದ ಬೆನಕ ಸಭಾಭವನ ನಾಡಿನ ಅಭಿವೃದ್ಧಿಯಲ್ಲಿ ದೊಡ್ಡ ಕಾಣಿಕೆ ಎಂದು ಅಭಿಪ್ರಾಯಪಟ್ಟರು.
ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ನಮ್ಮದು ಒಂದು ಪುಟ್ಟ ಪ್ರಯತ್ನ ಇದು ಎಂದು ಬೆನಕ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಕೆ. ಗೋಪಾಲಕೃಷ್ಣ ಅವರು ಪ್ರಾಸ್ತವಿಕವಾಗಿ ನುಡಿದರು.
ವೇದಿಕೆಯಲ್ಲಿ ಹಿರಿಯರಾದ ಸೀತಾರಾಮ ಭಟ್ ಉಪಸ್ಥಿತರಿದ್ದರು. ಬೆನಕ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಎಸ್.ಜಿ.ಭಟ್ ಹಾಗೂ ಜನರಲ್ ಮ್ಯಾನೇಜರ್ ದೇವಸ್ಯ ನಿರ್ವಹಿಸಿದ ಕಾರ್ಯಕ್ರಮದಲ್ಲಿ ಮೊದಲಿಗೆ ಡಾ| ಅಂಕಿತಾ ಜಿ.ಭಟ್ ಪ್ರಾರ್ಥಿಸಿ, ಡಾ| ಭಾರತಿ.ಜಿ.ಕೆ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ನ ಅಧ್ಯಕ್ಷ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ್ ಹಾಗೂ ಪದಾಧಿಕಾರಿಗಳು, ಸೇವಾಭಾರತಿ ಕನ್ಯಾಡಿ ಇದರ ಅಧ್ಯಕ್ಷ ವಿನಾಯಕ್ ರಾವ್, ಬೆಳ್ತಂಗಡಿ ರೆಡ್ ಕ್ರಾಸ್ ಸೊಸೈಟಿಯ ಪದಾಧಿಕಾರಿಗಳು, ಸ್ಥಳೀಯ ವೈದ್ಯರು ಹಾಗೂ ಬೆನಕ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.