ಎಳನೀರು ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದವರ ಮೇಲೆ ಗುಡ್ಡ ಕುಸಿತ: ನಾಲ್ವರಲ್ಲಿ ಓರ್ವ ನಾಪತ್ತೆ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಮಣ್ಣಿನಡಿ ಸಿಲುಕಿದ ಉಜಿರೆಯ ಸನತ್ ಶೆಟ್ಟಿ; ಎಸ್‌ಡಿಆರ್‌ಎಫ್, ಪೊಲೀಸ್ ಗೃಹ ರಕ್ಷಕ ದಳದಿಂದ ಮುಂದುವರಿದ ಶೋಧ ಕಾರ್ಯ

ವಿದ್ಯಾರ್ಥಿ ಸನತ್ ಶೆಟ್ಟಿ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಅಂಚಿನಲ್ಲಿರುವ ಬಂಗಾರಪಲ್ಕೆ ಬಡಮನೆ ಅಬ್ಬಿ ಜಲಪಾತ ವೀಕ್ಷಣೆ ಮಾಡುತ್ತಿದ್ದ ನಾಲ್ವರ ಮೇಲೆ ಗುಡ್ಡ ಕುಸಿದು ಬಿದ್ದಿದ್ದು, ಉಜಿರೆಯ ನಿವಾಸಿ ವಿದ್ಯಾರ್ಥಿಯೋರ್ವ ಮಣ್ಣಿನಡಿ ಸಿಲುಕಿ ನಾಪತ್ತೆಯಾದ ಘಟನೆ ಜ.25ರಂದು ನಡೆದಿದ್ದು, ಕಳೆದ ಎರಡು ದಿನಗಳಿಂದ ಅವರ ದೇಹ ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಆದರೆ ಜ.27ರ ಸಂಜೆ ತನಕ ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಸುಳಿವು ದೊರಕಿಲ್ಲ ಎಂದು ವರದಿಯಾಗಿದೆ.

ಲಾಯಿಲ ಗ್ರಾಮದ ಕಾಶಿಬೆಟ್ಟು ಕೃಷ್ಣ ವಾಸುದೇವ ಶೆಟ್ಟಿ ಅವರ ಪುತ್ರ ಉಜಿರೆ ಎಸ್‌ಡಿಎಂ ಕಾಲೇಜಿನ ದ್ವೀತಿಯ ಪದವಿ ವಿದ್ಯಾರ್ಥಿ ಸನತ್ ಶೆಟ್ಟಿ (21ವ) ಮಣ್ಣಿನಡಿ ಸಿಲುಕಿಕೊಂಡವರಾಗಿದ್ದು, ಇವರ ಜೊತೆಗಿದ್ದ ಉಜಿರೆ ಪರಿಸರದ ನಿವಾಸಿಗಳಾದ ಸೌರಭ್, ಶರತ್ ಮತ್ತು ಅದಿತ್ಯ ಅವರು ಅಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳದಲ್ಲಿ ರಾಜ್ಯ ವಿಪತ್ತು ನಿರ್ವಹಣ ತಂಡ, ಅಗ್ನಿಶಾಮಕದಳ, ಗೃಹರಕ್ಷಕ ದಳ, ಪೊಲೀಸ್, ವನ್ಯಜೀವಿವಿಭಾಗ, ಕಂದಾಯ, ಗ್ರಾಮ ಪಂಚಾಯತು, ಶ್ರೀ ಕ್ಷೇ.ಧ. ವಿಪತ್ತು ನಿರ್ವಹಣಾ ತಂಡ, ಸೇರಿದಂತೆ ಸಂಘ-ಸಂಸ್ಥೆಯವರು, ಸ್ಥಳೀಯರು ಸೇರಿದಂತೆ ಸುಮಾರು 100ಕ್ಕೂ ಅಧಿಕ ಮಂದಿ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಘಟನೆಯ ಹಿನ್ನಲೆ: ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಸುಮಾರು 40 ಕಿ.ಮೀ ದೂರದಲ್ಲಿರುವ ಮಲವಂತಿಗೆ ಗ್ರಾಮದ ಬಂಗಾರಪಲ್ಕೆ ಬಡಮನೆ ಎಂಬಲ್ಲಿರುವ ಜಲಪಾತವನ್ನು ನೋಡಲು ದೂರದ ಊರುಗಳಿಂದ ಪ್ರವಾಸಿಗರು ಬರುತ್ತಿರುತ್ತಾರೆ. ದಿಡುಪೆಯಿಂದ ಕಾಡುದಾರಿಯಲ್ಲಿ ಹೋಗುವುದಾದರೆ ಇಲ್ಲಿಗೆ ಕೇವಲ 12 ಕಿ.ಮೀ ದೂರ ಮಾತ್ರ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಒಳಗಡೆ ಈ ಜಲಪಾತವಿದೆ.


ಉಜಿರೆ ನಿವಾಸಿಯಾಗಿರುವ ಸನತ್ ಶೆಟ್ಟಿ ಹಾಗೂ ಅವರ ಸ್ನೇಹಿತರಾದ ಉಜಿರೆ ಪರಿಸರದ ನಿವಾಸಿಗಳಾದ ಸೌರಭ್, ಶರತ್ ಮತ್ತು ಅದಿತ್ಯ ಅವರು ಕ್ರಿಕೆಟ್ ಆಡಲು ಸಂಸೆಯಲ್ಲಿರುವ ತನ್ನ ಸ್ನೇಹಿತನ ಮನೆಗೆ ಜ.24ರಂದು ಬಂದಿದ್ದರು. ಆ ದಿನ ಅಲ್ಲೇ ತಂಗಿದ್ದು, ಮರುದಿನ ಜ.25ರಂದು ಮಧ್ಯಾಹ್ನ ನಾಲ್ಕು ಮಂದಿ ಹತ್ತಿರದಲ್ಲಿರುವ ಬಂಗಾರಪಲ್ಕೆ ಜಲಪಾತ ವೀಕ್ಷಣೆ ಮಾಡಲು ತೆರಳಿದ್ದರೆನ್ನಲಾಗಿದೆ.

 ಬೃಹತ್ ಬಂಡೆ ಸಹಿತ ಗುಡ್ಡಕುಸಿತ: ನಾಲ್ಕು ಮಂದಿ ಯುವಕರು ಜಲಪಾತದ ಕಡೆ ತೆರಳಿ ಸುಮಾರು 50 ಅಡಿ ಎತ್ತರದಿಂದ ಜಲಧಾರೆಯನ್ನು ವೀಕ್ಷಣೆ ಮಾಡುತ್ತಿರುವ ಸಂದರ್ಭದಲ್ಲಿ ದೊಡ್ಡ ಶಬ್ದವೊಂದು ಕೇಳಿಸಿದೆ. ಮಣ್ಣು ಮಿಶ್ರಿತ ನೀರು ಬಂದಾಗ ಆದಿತ್ಯ ಮೇಲೆ ಬಂದು ಪರೀಶಿಲನೆ ನಡೆಸುತ್ತಿರುವಾಗ ಏಕಾಏಕಿ ಮೇಲಿನಿಂದ ಸುಮಾರು 30 ಅಡಿ ಅಗಲದಷ್ಟು ಪ್ರದೇಶದ ಮಣ್ಣು ಸಹಿತ ಬೃಹತ್ ಬಂಡೆಕಲ್ಲುಗಳು, ಮರಮಟ್ಟು, ಕಲ್ಲು, ಗಿಡಗಂಟಿ ಸಹಿತ ಇವರ ಮೇಲೆ ಕುಸಿದು ಬಿದ್ದಿತ್ತೆನ್ನಲಾಗಿದೆ. ಈ ಸಂದರ್ಭದಲ್ಲಿ ಸನತ್ ಶೆಟ್ಟಿ ಜೊತೆಗಿದ್ದ ಮೂರು ಮಂದಿ ಓಡಿ ಬಂದು ಅಪಾಯದಿಂದ ಪಾರಾದರೆ, ಸನತ್ ಶೆಟ್ಟಿಯವರು ಮಣ್ಣಿನಡಿ ಸಿಲುಕಿಕೊಂಡು ನಾಪತ್ತೆಯಾದರೆಂದು ವರದಿಯಾಗಿದೆ.

ಪ್ರಪಾತದಡಿ ಬಿದ್ದ ಯುವಕ: ಮಧ್ಯಾಹ್ನ ಸುಮಾರು 12.30ರಿಂದ 1.30ರ ನಡುವೆ ಈ ದುರ್ಘಟನೆ ಸಂಭವಿಸಿದೆ. ಜಲಪಾತದಲ್ಲಿ ಸುಮಾರು 20 ಅಡಿಗಿಂತಲೂ ದೂರಕ್ಕೆ ಮಣ್ಣು, ಬಂಡೆ, ಮರಮಟ್ಟು ಸಹಿತ ಗುಡ್ಡ ಕುಸಿದು ಬಿದ್ದಿದ್ದು, ವಿದ್ಯಾರ್ಥಿ ಸನತ್ ಶೆಟ್ಟಿಯವರು ಅದರಡಿ ಸಿಲುಕಿ ನಾಪತ್ತೆಯಾಗಿದ್ದರು. ಕೂಡಲೇ ಜೊತೆಗಿದ್ದವರು ಸ್ಥಳೀಯರಿಗೆ ತಿಳಿಸಿ ನಂತರ ತಾಲೂಕು ಆಡಳಿತ, ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಯಿತು. ಈ ಬಗ್ಗೆ ಸನತ್ ಶೆಟ್ಟಿಯವರ ಸಹೋದರ ಶಮಿತ್ ಶೆಟ್ಟಿಯವರು ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.


ಬಂಗಾರಪಲ್ಕೆ ಪ್ರದೇಶದಲ್ಲಿ ಸುಮಾರು 11 ಮನೆಗಳಿದ್ದು, ಜಲಪಾತ ಪರಿಸರದಲ್ಲಿ ಯಾವುದೇ ಮನೆಗಳಿಲ್ಲ. ಈ ಪ್ರದೇಶಕ್ಕೆ ಹೋಗಬೇಕಾದರೆ ಸ್ವಲ್ಪ ದೂರ ಕಾಲು ದಾರಿಯಲ್ಲಿ ಸಾಗಬೇಕು. ಈ ದಾರಿಯುದ್ದಕ್ಕೂ ಒಂದು ಬದಿಯಿಂದ ಗುಡ್ಡ ಹಾಗೂ ಇನ್ನೋಂದು ಬದಿಯಿಂದ ಬೃಹತ್ ಕಣಿವೆಯಿದೆ. ಇಲ್ಲಿಗೆ ನಡೆದುಕೊಂಡು ಹೋಗಬೇಕು. ಯಾವುದೇ ರಸ್ತೆ ಇಲ್ಲ. ಇದರಿಂದಾಗಿ ಆ ಪ್ರದೇಶಕ್ಕೆ ಮಣ್ಣು ತೆರವು ಕಾರ್ಯಕ್ಕೆ ಯಂತ್ರೋಪಕರಣಗಳನ್ನು ಕೊಂಡೋಗಲು ಸಾಧ್ಯವಿಲ್ಲ. ಇದರಿಂದಾಗ ಹುಡುಕಾಟದ ಕಾರ್ಯಾಚರಣೆಗೆ ಬಹಳಷ್ಟು ತೊಡಕಾಗಿದೆ. ಇಲ್ಲಿಗೆ ಹೋಗಬೇಕಾದರೆ ರಸ್ತೆ ಮಾಡಿಯೇ ಹೋಗಬೇಕು. ಬೃಹತ್ ಗಾತ್ರದ ಬಂಡೆ ತೆರವುಗೊಳಿಸಬೇಕಾದರೆ ಜೆಸಿಬಿಯ ಅಗತ್ಯವಿದೆ. ಆದರೆ ಇಲ್ಲಿಗೆ ಹೋಗುವುದೇ ದೊಡ್ಡ ಸಮಸ್ಯೆಯಾಗಿ ಏರ್ಪಟ್ಟಿದೆ.

ಶಾಸಕ ಹರೀಶ್ ಪೂಂಜ ಭೇಟಿ: ಶಾಸಕ ಹರೀಶ್ ಪೂಂಜ ಅವರು ಜ.26ರಂದು ಸ್ಥಾಳಕ್ಕೆ ಭೇಟಿ ನೀಡಿ, ಕಾರ್ಯಾಚರಣೆಗೆ ಎಲ್ಲಾ ರೀತಿಯ ಸಹಕಾರ ನೀಡಿ ಸಂಜೆ ತನಕ ಸ್ಥಳದಲ್ಲಿ ಹಾಜರಿದ್ದರು. ಬೆಳ್ತಂಗಡಿಯ ಪ್ರಭಾರ ತಹಶೀಲ್ದಾರ್ ರಮೇಶ್ ಬಾಬು, ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ, ಎಸ್.ಐ ನಂದಕುಮಾರ್, ಮಲವಂತಿಗೆ ಗ್ರಾಮಕರಣಿಕ ರಾಘವೇಂದ್ರ, ಸಹಾಯಕ ಮಂಜುನಾಥ್, ಗ್ರಾ.ಪಂ ಸದಸ್ಯ ಪ್ರಕಾಶ್ ಕುಮಾರ್ ಜೈನ್, ಆರ್.ಐ ಪ್ರತಿಕ್, ಮಹೇಶ್ ಶೆಟ್ಟಿ ತಿಮರೋಡಿ ಭೇಟಿ ನೀಡಿದ್ದಾರೆ. ಶೃಂಗೇರಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಸ್ಥಳೀಯರು, ಸಂಘ-ಸಂಸ್ಥೆಯವರು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ. ಜ.27ರಂದು ಸಂಜೆ 6 ಗಂಟೆ ತನಕ ಕಾರ್ಯಾಚರಣೆ ನಡೆಸಲಾಯಿತು. ಇಲ್ಲಿ ದೊಡ್ಡ ಬಂಡೆಕಲ್ಲು ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಮಣ್ಣು, ಮರ ತೆಗೆಯುವ ಕಾರ್ಯ ನಡೆಯುತ್ತಿದೆ. ಕಾರ್ಯಾಚರಣೆ ಮುಂದುರಿಯಲಿದೆ ಎಂದು ಬೆಳ್ತಂಗಡಿ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ ತಿಳಿಸಿದ್ದಾರೆ.

ಕಾರ್ಯಾಚರಣೆ ಯಶಸ್ವಿಯಾಗುವ ವಿಶ್ವಾಸವಿದೆ: ಹರೀಶ್ ಪೂಂಜ

ಸುದ್ದಿಗೆ ಪ್ರತಿಕ್ರಿಯೆ ನೀಡಿದ ಶಾಸಕ ಹರೀಶ್ ಪೂಂಜ ಅವರು ಎಳನೀರಿನಲ್ಲಿ ಗುಡ್ಡ ಕುಸಿದು ಅಡಿಯಲ್ಲಿ ಸನತ್ ಶೆಟ್ಟಿ ಎಂಬ ಯುವಕ ಸಿಕ್ಕಿಕೊಂಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ತಂಡ, ಅಗ್ನಿಶಾಮಕ ದಳ, ಪೊಲೀಸರು, ಅರಣ್ಯ, ಕಂದಾಯ ಸೇರಿದಂತೆ ಸಂಘ-ಸಂಸ್ಥೆಯವರು ಸ್ಥಳೀಯರು ನಡೆಸುತ್ತಿರುವ ಕಾರ್ಯಾಚರಣೆ ಪ್ರಗತಿಯಲ್ಲಿದೆ. ದುರ್ಗಮ ಪ್ರದೇಶ ಹಾಗೂ ಕಾಡು ಪ್ರದೇಶವಾಗಿರುವುದರಿಂದ ಯಾವುದೇ ಯಂತ್ರಗಳ ಬಳಕೆ ಸಾಧ್ಯವಾಗದೆ ಕಷ್ಟವಾಗಿದೆ. ವಿಪತ್ತು ನಿರ್ವಹಣಾ ತಂಡ ಹಾಗೂ ಇತರು ಸೇರಿ ನಡೆಸುತ್ತಿರುವ ಕಾರ್ಯಾಚರಣೆಯ ಯಶಸ್ವಿಯಾಗಬಹುದು ಎಂಬ ವಿಶ್ವಾಸವಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.