ಬೆಳ್ತಂಗಡಿ: ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಅಫ್ ಇಂಡಿಯಾ (ಎಸ್ಡಿಪಿಐ) ವತಿಯಿಂದ 72ನೇ ಗಣರಾಜ್ಯೋತ್ಸವ ದಿನವಾದ ಜ.26 ರಂದು ಬೆಳ್ತಂಗಡಿಯಲ್ಲಿ ಕೇಂದ್ರ ಸರಕಾರದ ರೈತ ವಿರೋಧಿ ಕಾನೂನು ಹಿಂಪಡೆಯಲು ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿ ರೈತ ಐಕ್ಯತಾ ಸಂಗಮ ನಡೆಸಿದರು.
ಬೆಳ್ತಂಗಡಿ ಮೂರು ಮಾರ್ಗದಿಂದ ಬಸ್ ನಿಲ್ದಾಣದವರೆಗೆ ಮೆರವಣಿಗೆ ಮೂಲಕ ಬಂದು ಬಸ್ಸು ತಂಗದಾಣದ ಎದುರು ಪ್ರತಿಭಟನಾ ಸಭೆ ನಡೆಯಿತು.
ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಆಲ್ಫೋನ್ಸ್ ಫ್ರಾಂಕೊ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕೇಂದ್ರ ಸರಕಾರದ ಆಡಳಿತ ರೀತಿಯಿಂದ ದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ದೈನಂದಿನ ದಿನಬಳಕೆಯ ವಸ್ತುಗಳ ಬೆಲೆ ಏರುತ್ತಲೇ ಹೋದರೂ ವಿರೋಧ ಪಕ್ಷ ಕಾಂಗ್ರೆಸ್ ಕಣ್ಣು ಮುಚ್ಚಿಕೊಂಡಿದೆ. ಸಂವಿಧಾನಕ್ಕೆ ಗೌರವ ಇಲ್ಲದಂತಾಗಿದೆ. ರೈತರು ಕಷ್ಟದಲ್ಲಿದ್ದು, ರೈತ ವಿರೋಧಿ ಕಾನೂನು ಹಿಂಪಡೆಯಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ಇದಕ್ಕಾಗಿ ಈ ವರ್ಷದ ಗಣರಾಜ್ಯೋತ್ಸವ ಹಬ್ಬವನ್ನು ಕರಾಳ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಎಸ್ಡಿಪಿಐ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಅಧ್ಯಕ್ಷ ಹೈದರ್ ನೀರ್ಸಾಲ್ ಮಾತನಾಡಿ, ಕೇಂದ್ರ ಸರಕಾರದ ರೈತ ವಿರೋಧಿ ಕಾನೂನಿನಿಂದ ಬಡ ರೈತರಿಗೆ ತೊಂದರೆಯಾಗುತ್ತಿದ್ದು ಶ್ರೀಮಂತ ಉದ್ಯಮಿಗಳಿಗೆ ಸರಕಾರ ಬೆಂಬಲ ನೀಡುತ್ತಿದೆ. ಈ ವರ್ಷ ಗಣರಾಜ್ಯೋತ್ಸವವನ್ನು ದೆಹಲಿಯಲ್ಲಿ ಮೂರು ತಿಂಗಳಿನಿಂದ ಹೋರಾಟ ಮಾಡುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲವಾಗಿ ಗಣರಾಜ್ಯೋತ್ಸವವನ್ನು ರೈತ ಐಕ್ಯತಾ ಸಂಗಮವಾಗಿ ಆಚರಿಸಲಾಗುತ್ತಿದೆ ಎಂದರು.
ಎಸ್ಡಿಪಿಐ ಜಿಲ್ಲಾ ಅಧ್ಯಕ್ಷ ಮುಸ್ತಾಫ್ ಜಿ ಕೆರೆ, ಎಸ್ಡಿಪಿಐ ಜಿಲ್ಲಾ ಸದಸ್ಯ ಅಕ್ಬರ್ ಬೆಳ್ತಂಗಡಿ, ತಾಲೂಕಿನ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ನಿಝಾನ್ ಗೇರುಕಟ್ಟೆ ಸ್ವ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.