ಬೆಳಾಲು: ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ವತಿಯಿಂದ ಬೆಳಾಲು ಗ್ರಾಮದ ಜೇನು ಕೃಷಿಕರಿಗೆ ಜೇನು ಕೃಷಿ ತರಬೇತಿಯು ಜ.19 ಮತ್ತು 20ರಂದು ಬೆಳಾಲು ಸೇವಾ ಸಹಕಾರ ಸಂಘದ ಸಹಯೋಗದಲ್ಲಿ ಸಂಘದ ಸಭಾಭವನದಲ್ಲಿ ನಡೆಯಿತು.
ಕೊಕ್ಕಡ ಕ್ಷೇತ್ರದ ತಾ.ಪಂ.ಸದಸ್ಯ ಲಕ್ಷ್ಮೀನಾರಾಯಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಹಕಾರ ಸಂಘದ ಅಧ್ಯಕ್ಷ ಪದ್ಮ ಗೌಡ, ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಸಂಜೀವ, ತೋಟಗಾರಿಕೆ ಹಿರಿಯ ಸ.ನಿರ್ದೇಶಕ ಚಂದ್ರಶೇಖರ್, ಸಹಕಾರ ಸಂಘದ ಮ್ಯಾನೇಜರ್ ನಾರಾಯಣ ಗೌಡ ಉಪಸ್ಥಿತರಿದ್ದರು. ತಾಲೂಕಿನ ಹಿರಿಯ ಜೇನು ತರಬೇತಿದಾರರಾದ ಶ್ರೀ ಶ್ಯಾಮ್ ಭಟ್ ರವರು ಜೇನು ಕೃಷಿಯ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ಜ.20ರಂದು ಸುಲೈಮಾನ್ ಭೀಮಂಡೆ ಯವರ ಮನೆಯಲ್ಲಿ ಪ್ರಾಯೋಗಿಕ ತರಬೇತಿ ನಡೆಯಿತು. ಧರ್ಮಸ್ಥಳ ಜಿ.ಪಂ. ಕ್ಷೇತ್ರದ ಸದಸ್ಯ ಕೊರಗಪ್ಪ ನಾಯ್ಕ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ತರಬೇತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಮಾರು 40ಕ್ಕಿಂತಲೂ ಅಧಿಕ ಜನರು ಈ ತರಬೇತಿಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.
ಇತ್ತೀಚೆಗೆ ಬೆಳಾಲಿನ 67 ಜನರಿಗೆ ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಸಹಾಯಧನದೊಂದಿಗೆ ಜೇನು ಪೆಟ್ಟಿಗೆಯನ್ನು ಜೇನುಕುಟುಂಬ ಸಹಿತವಾಗಿ ನೀಡಲಾಗಿತ್ತು. ಸುಮಾರು ೫೦ಕ್ಕಿಂತಲೂ ಅಧಿಕ ಜೇನು ಪೆಟ್ಟಿಗೆಗಳು ಬೆಳಾಲಿನಲ್ಲಿದ್ದು ಜೇನು ಕೃಷಿಗೆ ಉತ್ತಮ ಪರಿಸರ, ಯೋಗ್ಯವಾದ ವಾತಾವರಣವಿದೆ. ಆದರೆ ಪರಂಗಾಜೆ ಸುರೇಶ್ ಭಟ್ ಮತ್ತು ಸುರೇಶ್ ಶೆಟ್ಟಿಗಾರ್ರನ್ನು ಹೊರತುಪಡಿಸಿ ಉಳಿದ ಯಾರಿಗೂ ಜೇನು ಕೃಷಿಯ ಮಾಹಿತಿ ಇರಲಿಲ್ಲ. ಹಾಗಾಗಿ ಬೆಳಾಲಿನಲ್ಲಿಯೇ ತರಬೇತಿ ಕಾರ್ಯಕ್ರಮ ಮಾಡಬೇಕು ಎಂಬುದಾಗಿ ತೋಟಗಾರಿಕೆ ಇಲಾಖೆಯವರೊಂದಿಗೆ ಕೇಳಿಕೊಂಡ ಮೇರೆಗೆ ಈ ತರಬೇತಿ ಏರ್ಪಡಿಸಲಾಗಿತ್ತು.