ಬೆಳ್ತಂಗಡಿ: ಎಸ್.ಡಿ.ಎಂ ಪದವಿ ಕಾಲೇಜಿನ ಬಿ.ವೋಕ್ ವಿಭಾಗದ ವಿದ್ಯಾರ್ಥಿ ಹಾಗೂ ಹತ್ಯಡ್ಕ ಗ್ರಾಮದ ನಾವಳೆಯ ಶಾಜಿ ಕೆ.ವಿ ಮತ್ತು ರಜನಿ ದಂಪತಿಯ ಪುತ್ರ, ಶಿಲ್ಪ ಇವರ ಸಹೋದರ ಶಿಲ್ಜೋ ವರ್ಗೀಸ್ ಅವರ ಸಂಕಲನದ `ಸವಿ’ ಎಂಬ ಕಿರಿಚಿತ್ರದ ಉತ್ತಮ ಎಡಿಟಿಂಗ್ಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಲಭಿಸಿದೆ.
ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಪ್ರತಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಆಯೋಜಿಸಿದ್ದ, ರಾಷ್ಟ್ರ ಮಟ್ಟದ ಕಿರುಚಿತ್ರ ಸ್ಪರ್ಧಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸ್ಪರ್ಧೆಯಲ್ಲಿ ವಿವಿಧ ಕಾಲೇಜಿನ ೩೨ ತಂಡಗಳು ಭಾಗವಹಿಸಿದ್ದು, ಅದರಲ್ಲಿ 10 ಕಿರುಚಿತ್ರಗಳು ಕೊನೆಯ ಸುತ್ತಿಗೆ ಆಯ್ಕೆಯಾಗಿದ್ದವು. ಇದರಲ್ಲಿ ಉತ್ತಮ ಕಿರುಚಿತ್ರ ಎಡಿಟಿಂಗ್, ಛಾಯಾಗ್ರಹಣ ಒಳಗೊಂಡಂತೆ ವಿವಿಧ ಅಂಶಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಎಸ್ಡಿಎಂ ಪದವಿ ಕಾಲೇಜಿನಲ್ಲಿ ಕಳೆದ ವರ್ಷ ಆರಂಭಿಸಿದ್ದ ಬಿ.ವೋಕ್(ಬ್ಯಾಚುಲರ್ ಆಪೊ ವೊಕೇಶನ್) ಕೋರ್ಸುನ 13 ವಿದ್ಯಾರ್ಥಿಗಳು ಸೇರಿಕೊಂಡು ಲಾಕ್ಡೌನ್ ಸಂದರ್ಭದಲ್ಲಿ ಚಿತ್ರೀಕರಿಸಿದ `ಸವಿ’ಎಂಬ ಕಿರುಚಿತ್ರ ಇದಾಗಿದ್ದು, ಈ ಕಿರುಚಿತ್ರವನ್ನು ಆಂಟನಿ ಅವರು ನಿರ್ದೇಶಿಸಿದ್ದಾರೆ.
ಈ ಕಿರುಚಿತ್ರವು ಕೋವಿಡ್ ಸಕಾರತ್ಮಕತೆ ವಿಷಯದ ಕುರಿತಾಗಿದ್ದು, ಚಿತ್ರವನ್ನು ಕಾರ್ಕಳದ ಪುರಾತನ ಮನೆ ಮತ್ತಿತರ ಪ್ರದೇಶಗಳಲ್ಲಿ ಚಿತ್ರಿಕರಣ ಮಾಡಲಾಗಿದೆ. ಭಾರತದ ಓರ್ವ ವ್ಯಕ್ತಿ ಕೆಲಸ ನಿಮಿತ್ತ ವಿದೇಶಕ್ಕೆ ತೆರಳಿದ್ದು, ತನ್ನೂರಿನ ಬಾಂಧವ್ಯವನ್ನು ಕಳೆದುಕೊಂಡಿರುತ್ತಾನೆ. ಕೊರೋನಾ ತೀವ್ರತೆಯಿಂದಾಗಿ ಸ್ವದೇಶಕ್ಕೆ ಮರಳಿ ಬಂದಾಗ ಅವನಿಗೆ ತಂದೆ-ತಾಯಿ ಹಾಗೂ ಊರಿನ ಜನರ ಪ್ರೀತಿ, ವಿಶ್ವಾಸ ಸಿಗುವುದರೊಂದಿಗೆ ಬಾಲ್ಯದ ನೆನಪುಗಳು ಮರುಕಳಿಸುತ್ತವೆ. ಅವನು ತನ್ನ ಜೀವನದಲ್ಲಿ ಕಳೆದುಕೊಂಡಿದ್ದ ಹಳ್ಳಿ ಸೊಗಡನ್ನು ಕೊರೋನಾವು ಮತ್ತೆ ಪಡೆದುಕೊಳ್ಳುವಂತೆ ಮಾಡುತ್ತದೆ. ಹೀಗೆ ಕೊರೋನಾವು ಕೆಲವರ ಜೀವನದಲ್ಲಿ ಧನಾತ್ಮಕವುಳ್ಳ ಅಂಶಗಳನ್ನು ತಂದು ಕೊಟ್ಟಿದೆ ಎಂದು ಈ ಕಿರುಚಿತ್ರದ ಸಂದೇಶವಾಗಿದೆ.