ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಪ್ರಯುಕ್ತ ಜ . 21 ರಂದು ರಾತ್ರಿ ಶ್ರೀ ಜನಾರ್ದನ ಸ್ವಾಮಿ ಹಾಗೂ ಮಂಜುಳೇಶನ ಮಹಾ ರಥೋತ್ಸವವು ಭಕ್ತಿ ,ಸಡಗರ ,ಸಂಭ್ರಮದಿಂದ ಸಹಸ್ರಾರು ಭಕ್ತಾದಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಸಂಪನ್ನಗೊಂಡಿತು. ಮೊಕ್ತೇಸರ ವಿಜಯರಾಘವ ಪಡುವೆಟ್ನಾಯರ ನೇತೃತ್ವದಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರ ತಾಂತ್ರಿಕ ವಿಧಿ ವಿಧಾನಗಳೊಂದಿಗೆ ವಿದ್ಯುಕ್ತವಾಗಿ ನಡೆಯಿತು.
ರಾತ್ರಿ ಶ್ರೀ ಜನಾರ್ದನಸ್ವಾಮಿಯ ಉತ್ಸವ ಮೂರ್ತಿಯನ್ನು ವೆಂಕಟರಾಜ ಹೆಬ್ಬಾರ್ ಹಾಗು ಶ್ರೀ ಮಂಜುಳೇಶ ನ ಉತ್ಸವ ಮೂರ್ತಿಯನ್ನು ರಾಮಚಂದ್ರ ಹೊಳ್ಳರು ತಲೆಮೇಲೆ ಹೊತ್ತುಕೊಂಡು ಉರ್ಕು ಸುತ್ತು ,ಚೆಂಡೆ ಸುತ್ತು ,ಸ್ಯಾಕ್ಸೋಫೋನ್ ಸುತ್ತು,ಪಲ್ಲಕಿ ಸುತ್ತು ,ಬೆಳ್ಳಿರಥ ,ಬ್ಯಾಂಡ್ ಸುತ್ತು ,ಶಂಖ-ಜಾಗಟೆ ಸುತ್ತು ಗಳಲ್ಲಿ ವಿವಿಧ ವಾದ್ಯ ವಾದನಗಳಿಗೆ ನರ್ತನ ಸೇವೆಯ ಸುತ್ತುಬಲಿ ನಡೆಯಿತು.
ಸಹಸ್ರಾರು ಭಕ್ತಾದಿಗಳು ಶ್ರೀ ದೇವರ ಉತ್ಸವವನ್ನು ಕಣ್ತುಂಬಿಕೊಂಡರು. ಬಳಿಕ ರಥಬೀದಿಯಲ್ಲಿ ನೃತ್ಯ ಸೇವೆ ನಡೆದು ಮಧ್ಯರಾತ್ರಿ ವೇಳೆ ಶ್ರೀ ದೇವರ ರಥಾರೋಹಣ ದಲ್ಲಿ ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು . ರಥದಲ್ಲಿ ವರ್ತಕರ ಹಣ್ಣುಕಾಯಿ ,ಪೂಜೆ ನಡೆದು ರಥವನ್ನು ಜಯಘೋಷದೊಂದಿಗೆ ಅಶ್ವತ್ಥಕಟ್ಟೆವರೆಗೆ ಎಳೆದು ಅಲ್ಲಿ ಪೂಜೆ ನೆರವೇರಿಸಿ ಮರಳಿ ಸ್ವಸ್ಥಾನಕ್ಕೆ ತರಲಾಯಿತು.
ಸುಡುಮದ್ದುಗಳ ಪ್ರದರ್ಶನ ನಡೆಯಿತು ದೇವಸ್ಥಾನವನ್ನು ಪುಷ್ಪಾಲಂಕಾರ ಹಾಗು ವಿದ್ಯುತ್ ದೀಪಾಲಂಕಾರಗಳಿಂದ ಶೃಂಗರಿಸಲಾಗಿತ್ತು . ರಾತ್ರಿ ಶ್ರೀ ಭೂತಬಲಿ ನಡೆದು ದೇವರ ಉತ್ಸವ ಸಮಾಪನಗೊಂಡಿತು.ರಥಬೀದಿಯಲ್ಲಿ ವ್ಯಾಪಾರ ಮಳಿಗೆಗಳು ಭಕ್ತಾದಿಗಳನ್ನು ವಿಶೇಷವಾಗಿ ಆಕರ್ಷಿಸಿತ್ತು. ಸುದ್ದಿ ಬೆಳ್ತಂಗಡಿ ಯೂಟ್ಯೂಬ್ ಚಾನಲ್ ಮತ್ತಿತರ ವಾಹಿನಿಗಳಲ್ಲಿ ಉತ್ಸವದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದು ಅನೇಕರು ಮನೆಯಲ್ಲೇ ಕುಳಿತು ಉತ್ಸವವನ್ನು ವೀಕ್ಷಿಸಿದರು .
ಜ 22 ರಂದು ಬೆಳಿಗ್ಗೆ ಶ್ರೀ ದೇವರ ಕವಾಟೋದ್ಘಾಟನೆ ನಡೆಯಿತು