ಬೆಳ್ತಂಗಡಿಯನ್ನು ಸಂಪೂರ್ಣ ಸ್ವಚ್ಛ ನಗರವಾಗಿ ಮಾರ್ಪಡಿಸಲು ಸಾರ್ವಜನಿಕರ ಸಹಕಾರ ಅಗತ್ಯ: ರಜನಿ ಕುಡ್ವ
ಬೆಳ್ತಂಗಡಿ ನಗರವನ್ನು ಸಂಪೂರ್ಣ ಸ್ವಚ್ಛ ಸುಂದರ ನಗರವಾಗಿ ಮಾರ್ಪಡಿಸಲು ಪಟ್ಟಣ ಪಂಚಾಯತ್ ಕೌನ್ಸಿಲ್ ಹಾಗೂ ಅಧಿಕಾರ ವಗ೯ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ನಗರದ ಎಲ್ಲಾ ಸಾರ್ವಜನಿಕರ ಅಂಗಡಿ-ಮುಂಗಟ್ಟು ಉದ್ದಿಮೆಗಳು ಮನೆಗಳು ವಸತಿ ಪ್ರದೇಶಗಳು ಇತ್ಯಾದಿ ಎಲ್ಲರ ಸಂಪೂರ್ಣ ಸಹಕಾರ ಅಗತ್ಯವಾಗಿರುತ್ತದೆ. ನಮ್ಮ ಮನೆಯ ತ್ಯಾಜ್ಯವನ್ನು ನಾವೇ ಹಸಿ ಕಸ ಒಣ ಕಸವಾಗಿ ಬೇರ್ಪಡಿಸಿ ಪೌರಕಾರ್ಮಿಕ ಸಿಬ್ಬಂದಿಗಳಿಗೆ ನೀಡಬೇಕು ನಮ್ಮ ಪರಿಸರದ ಸ್ವಚ್ಛತೆಯನ್ನು ನಾವೆಲ್ಲರೂ ಸೇರಿ ನಿರ್ವಹಿಸಿದಾಗ ಸಾರ್ವಜನಿಕ ಆರೋಗ್ಯ ಸಾಧ್ಯ ಎಂದು ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ ಕರೆ ನೀಡಿದರು.
ಅವರುಜ.22 ರಂದು ಬೆಳ್ತಂಗಡಿ ಪಟ್ಟಣ ಪಂಚಾಯಿತಿನ ಪೌರಕಾರ್ಮಿಕರ ಸಮಸ್ಯೆಗಳ ಬಗ್ಗೆ ಹಾಗೂ ಸ್ವಚ್ಛತಾ ಜಾಗೃತಿ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿಯೊಬ್ಬ ಪೌರಕಾರ್ಮಿಕರು ಕನಿಷ್ಠ ದಿನಕ್ಕೆ ಎಂಟು ಗಂಟೆಯ ಕರ್ತವ್ಯವನ್ನು ನಿರ್ವಹಿಸಿ ಯಾವುದೇ ಅನಧಿಕೃತ ರಜೆಯನ್ನು ಪಡೆಯದೇ ಸ್ವಚ್ಛತಾ ರಾಯಭಾರಿಗಳಾಗಿ ಅವರು ಕರ್ತವ್ಯ ನಿರ್ವಹಿಸಬೇಕು ಹಾಗೂ ತಮ್ಮ ಸೌಲಭ್ಯವನ್ನು ಪಡೆದುಕೊಳ್ಳಬೇಕು. ಬೆಳ್ತಂಗಡಿ ಪಟ್ಟಣ ಪಂಚಾಯತ್ ಸಂಪೂರ್ಣ ಸ್ವಚ್ಛತೆಗೆ ಅಗತ್ಯವಿರುವ ಎಲ್ಲಾ ಸಹಕಾರವನ್ನು ತಮ್ಮ ಕೌನ್ಸಿಲಿನಿಂದ ನೀಡಲು ಬದ್ಧರಾಗಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಯಪಡಿಸಿದರು.
ಪಟ್ಟಣ ಪಂಚಾಯಿತಿಯ ಎಲ್ಲಾ ವಾರ್ಡ್ ಗಳಲ್ಲಿ ನಿಗದಿತವಾಗಿ ಮನೆ-ಮನೆ ಕಸ ಸಂಗ್ರಹಣೆ ಕಾರ್ಯವನ್ನು ಮಾಡಬೇಕು ಒಂದು ವೇಳೆ ಹೆಚ್ಚುವರಿಯಾಗಿ ಪೌರಕಾರ್ಮಿಕರು ದುಡಿದರೆ ಅಂಥ ಸಂದರ್ಭದಲ್ಲಿ ಹೆಚ್ಚುವರಿ ವೇತನವನ್ನು ಪಾವತಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.
ಪೌರಕಾರ್ಮಿಕರು, ತಮ್ಮ ಖಾಯಂಮಾತಿ, ವಸತಿಗೃಹ, ಹಾಗೂ ವೇತನ ಹೆಚ್ಚಳದ ಬಗ್ಗೆ ಪ್ರಸ್ತಾವಿಸಿದರು.
ಸರಕಾರದ ಮಟ್ಟದಿಂದ ವಸತಿಗೃಹ ನಿರ್ಮಾಣಕ್ಕೆ ಜಮೀನು ಮತ್ತು ಅನುದಾನವನ್ನು ನೀಡಲು ಶಾಸಕರ ಮುಖಾಂತರ ಮನವಿ ಮಾಡಲು ನಿರ್ಣಯಿಸಲಾಯಿತು. ಪೌರಕಾರ್ಮಿಕರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಬದ್ಧತೆಯಿಂದ ನಿರ್ವಹಿಸಿದರೆ ಅವರಿಗೆ ಗರಿಷ್ಠ ಸೌಲಭ್ಯವನ್ನು ನೀಡಲಾಗುವುದು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಬಾರ್ ಗಳು, ವೈನ್ ಶಾಪುಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಸದರಿ ಉದ್ದಿಮೆಗಳ ಮಾಲೀಕರು ನಗರಪಂಚಾಯತ್ ವಾಹನಕ್ಕೆ ತಂದು ನೀಡುವ ವ್ಯವಸ್ಥೆ ಮಾಡತಕ್ಕದ್ದು. ಅಂತಹ ವ್ಯವಹಾರ ಸಂಸ್ಥೆಗಳಿಗೆ ಸಮವಸ್ತ್ರ ಧರಿಸಿ ರುವ ಪೌರಕಾರ್ಮಿಕರು ಒಳ ಪ್ರವೇಶ ಮಾಡುವುದರಿಂದ ದೂರವುಳಿಯಬಹುದು ಎಂದು ಸೂಚಿಸಲಾಯಿತು. ನಗರದ ಎಲ್ಲಾ ಭಾಗಗಳಲ್ಲಿ ಇಂದಿನಿಂದಲೇ ಹಸಿ ಕಸ ಒಣಕಸ ಬೇರ್ಪಡಿಸಿ ನೀಡಲು ಸಾರ್ವಜನಿಕರಲ್ಲಿ ಸಹಕಾರ ಕೋರಲಾಗಿದ್ದು ಬೇರ್ಪಡಿಸದೇ ಇರುವಂತಹ ತ್ಯಾಜ್ಯಗಳನ್ನು ನಗರಪಂಚಾಯತ್ ವಾಹನಕ್ಕೆ ಸ್ವೀಕರಿಸದಿರಲು ಹಾಗೂ ಬೇರ್ಪಡಿಸದೇ ಇರುವ ಮನೆಗಳು ಉದ್ದಿಮೆಗಳ ವರಿಗೆ ಸಾರ್ವಜನಿಕ ಸ್ವಚ್ಛತಾ ನಿಯಮಗಳಡಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚರ್ಚಿಸಲಾಯಿತು. ಮಾಂಸದ ತ್ಯಾಜ್ಯ , ತ್ಯಾಜ್ಯದ ನೀರು ರಸ್ತೆ ಬದಿ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಲು ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷರಾದ ಜಯಾನಂದ ಗೌಡ, ಸದಸ್ಯರುಗಳಾದ ಶರತ್ ಕುಮಾರ್, ಜನಾರ್ಧನ್ ಕುಲಾಲ್, ಲೋಕೇಶ್ ನಾಯಕ್, ಡಿ.ಜಗದೀಶ್, ತುಳಸಿ ಕರುಣಾಕರ್, ಅಗತ್ಯ ಸಲಹೆ ಸೂಚನೆಗಳನ್ನು ನೀಡಿ ಸಹಕಾರ ನೀಡಿದರು. ಸ್ವಚ್ಛತಾ ವಿಭಾಗದ ಎಲ್ಲಾ ಸಿಬ್ಬಂದಿಗಳು, ಗುಮಾಸ್ತೆ ವಿಜಯಾ, ಸಮುದಾಯ ಸಂಘಟನಾಧಿಕಾರಿ ವೆಂಕಟರಮಣ ಶರ್ಮ ಭಾಗವಹಿಸಿದ್ದರು.