ಶಿಕ್ಷಣದೊಂದಿಗೆ ಕ್ರೀಡೆಯನ್ನು ಮೈಗೂಡಿಸಿಕೊಳ್ಳಿ-ಹರೀಶ್ ಪೂಂಜ
ಪುಂಜಾಲಕಟ್ಟೆ: ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಯಾಗಬೇಕಾದರೆ ವಿದ್ಯೆಯೊಂದಿಗೆ ವಿನಯವೂ ಕೂಡಿದಾಗ ಮಾತ್ರ ಅದಕ್ಕೊಂದು ಶೋಭೆ ಬರುತ್ತದೆ. ಅದೇ ರೀತಿ ಶಿಕ್ಷಣದೊಂದಿಗೆ ಕ್ರೀಡೆಯನ್ನೂ ತಾವು ಮೈಗೂಡಿಸಿಕೊಳ್ಳಬೇಕು. ಶಾಲಾ ವಿದ್ಯಾರ್ಥಿಗಳು ಕ್ರೀಡಾಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳುವರೇ ಮೂಲಭೂತ ಅವಶ್ಯಕತೆಗಳು ಹೆಚ್ಚು ದೊರಕಿದಾಗ ಮಾತ್ರ ಸಾಧ್ಯ ಎಂದು ಬೆಳ್ತಂಗಡಿ ತಾಲೂಕಿನ ಶಾಸಕರಾದ ಹರೀಶ್ ಪೂಂಜಾರವರು ಹೇಳಿದರು.
ಅವರು ಕರ್ನಾಟಕ ಪಬ್ಲಿಕ್ಸ್ಕೂಲ್ನಲ್ಲಿ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಯಿಂದ ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಮಮತಾ ಎಂ. ಶೆಟ್ಟಿಯವರ ಶಿಫಾರಸಿನೊಂದಿಗೆ ಮಂಜೂರುಗೊಂಡಿರುವ ಅನುದಾನದ ಚೆಕ್ನ್ನು ವಿತರಿಸಿ ಮಾತನಾಡಿದರು.
ಘನ ಕರ್ನಾಟಕ ಸರಕಾರವು ತನ್ನ ಹೊಸ ಚಿಂತನೆಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡುವ ಹೊಸ ಯೋಜನೆಯೇ ಕರ್ನಾಟಕ ಪಬ್ಲಿಕ್ ಶಾಲೆಗಳು. ಪ್ರತೀ ತಾಲೂಕಿಗೆ ಒಂದರಂತೆ ಈ ಶಾಲೆಗಳು ಮಂಜೂರುಗೊಂಡು ಇದೀಗ ಹೊಸ ಮನ್ವಂತರದತ್ತ ಹೆಜ್ಜೆ ಹಾಕುತ್ತಿವೆ. ಈ ಪುಂಜಾಲಕಟ್ಟೆಯೂ ಕೂಡಾ ಅದೇ ಸಾಲಿನಲ್ಲಿ ಮಿಂಚಬೇಕು ಎಂಬುದು ನನ್ನ ಪರಿಕಲ್ಪನೆಯಾಗಿದೆ. ಈ ಕಲ್ಪನೆಯು ಸಾಕಾರಗೊಳ್ಳಬೇಕಾದರೆ ಪೋಷಕರು, ಶಿಕ್ಷಕರು ಹಾಗೂ ಜನಪ್ರತಿನಿಧಿಗಳು ಒಂದೇ ಚಿಂತನೆಯಿಂದ ಕಾರ್ಯಪ್ರವೃತ್ತರಾಗಬೇಕು. ಈಗಾಗಲೇ ಸಿ.ಎಸ್.ಆರ್ ಅನುದಾನವನ್ನು ತಾಲೂಕಿಗೆ ತರಿಸುವಲ್ಲಿ ನಾನು ಯಶಸ್ವಿಯಾಗಿದ್ದರೆ ಅದಕ್ಕೆ ಮೂಲ ಕಾರಣ ನಿಮ್ಮೆಲ್ಲರ ಸಹಕಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ ಉಪಸ್ಥಿತರಿದ್ದು, ಸಮಯೋಚಿತ ವಿಚಾರಧಾರೆಯನ್ನು ಹಂಚಿಕೊಂಡರು. ವೇದಿಕೆಯಲ್ಲಿ ಮಡಂತ್ಯಾರು ಕ್ಷೇತ್ರದ ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ್, ಮಡಂತ್ಯಾರು ಗ್ರಾ.ಪಂ ಸದಸ್ಯರಾದ ಹನೀಫ್ ಮತ್ತು ಸಾರಾ ಸನತ್, ಕಾಲೇಜು ವಿಭಾಗದ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಮುಗೆರೋಡಿ ಸಂಜೀವ ಶೆಟ್ಟಿ, ಪ್ರೌಢಶಾಲಾ ವಿಭಾಗದ ಎಸ್.ಡಿ.ಎಂ.ಸಿ ಉಪಾಧ್ಯಕ್ಷ ಗಿರೀಶ್ ಮೂಲ್ಯ, ಪ್ರಾಥಮಿಕ ಶಾಲಾ ವಿಭಾಗದ ಎಸ್.ಡಿ.ಎಂ.ಸಿ ಅಧ್ಯಕ್ಷ ಜಯರಾಮ ಶೆಟ್ಟಿ ಹಾಗೂ ಕರ್ನಾಟಕ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಪ್ರಸಾದ ಅಜಿಲ ಹಾಗೂ ಸಹಾಯಕ ಅಭಿಯಂತರರಾದ ಗುರುಪ್ರಸಾದ್, ಸಂಸ್ಥೆಯ ಪ್ರಾಂಶುಪಾಲ ಪುಷ್ಪಲತಾ ಹೆಚ್.ಡಿ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಉದಯ ಕುಮಾರ್ ಬಿ., ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಶಿಕ್ಷಕ ಮೋನಪ್ಪ ಕೆ. ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರೌಢಶಾಲಾ ಗಣಿತ ಶಿಕ್ಷಕ ಗೋಪಾಲ ಸ್ವಾಗತಿಸಿ, ಪ್ರೌಢಶಾಲಾ ವಿಭಾಗದ ಕಲಾಶಿಕ್ಷಕ ಧರಣೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿ, ಆಂಗ್ಲಭಾಷಾ ಶಿಕ್ಷಕ ಹರಿಪ್ರಸಾದ್ ಆರ್. ಧನ್ಯವಾದವಿತ್ತರು. ಸರ್ವ ಬೋಧಕ ಮತ್ತು ಬೋಧಕೇತರ ವೃಂದದವರು ಸಹಕರಿಸಿದರು.