ಪತ್ರಿಕಾಗೋಷ್ಠಿ
ಬೆಳ್ತಂಗಡಿ : ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆ ಸೇರಿದಂತೆ ಸತತ ಸೋಲುಗಳಿಂದ ಕಂಗೆಟ್ಟಿರುವ ಕಾಂಗ್ರೆಸ್ ಪಕ್ಷಕ್ಕೆ ಈಗ ಯಾವುದರಲ್ಲಿಯೂ ನಂಬಿಕೆ ಇಲ್ಲ. ಬೆಳ್ತಂಗಡಿ ತಾಲೂಕಿನ ಮತದಾರರು ಬಿಜೆಪಿಯನ್ನು ಅಭೂತಪೂರ್ವವಾಗಿ ಗೆಲ್ಲಿಸಿ ಕೊಟ್ಟಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹತಾಷೆಯಿಂದ ಪ್ರಜೆಗಳ ತೀರ್ಪನ್ನು ಅಗೌರವಿಸಿ, ಅಪಮಾನಿಸುವ ಈ ಮನಸ್ಥಿತಿ ಕಾಂಗ್ರೆಸ್ ನಾಯಕರಲ್ಲಿ ಮುಂದುವರೆದಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿಯ ನಡವಳಿಕೆಗಳು ಶೋಭೆ ತರುವುದಿಲ್ಲ ಎಂದು ವಿಧಾನ ಪರಿಷತ್ ಶಾಸಕ ಪ್ರತಾಪ ಸಿಂಹ ನಾಯಕ್ ಹೇಳಿದರು.
ಅವರು ಜ.೨೦ ರಂದು ಬೆಳ್ತಂಗಡಿ ಪ್ರವಾಸಿಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಚುನಾವಣೆಯಲ್ಲಿ ಯಾವುದೇ ಪಕ್ಷವಾದರೂ ಜನರು ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕರಿಸಬೇಕು . ಇದು ಚುನಾವಣಾ ಧರ್ಮ. ಒಂದು ವೇಳೆ ಸೋತರೆ ‘ಯಾಕೆ ಸೋತಿದ್ದೇವೆ? ಎಲ್ಲಿ ಎಡವಿದ್ದೇವೆ? ಜನರು ನಮ್ಮನ್ನೇಕೆ ಸೋಲಿಸಿದರು? ಎಂಬ ವಿಚಾರಗಳ ಬಗ್ಗೆ ಪರಾಮರ್ಷೆ ಮಾಡಬೇಕು. ಅದನ್ನು ಬಿಟ್ಟು ಗೆದ್ದ ಪಕ್ಷವನ್ನು ಟೀಕಿಸಿ ಪ್ರಯೋಜನವಿಲ್ಲ. ಸೋಲು-ಗೆಲುವು ಸಾಮಾನ್ಯ, ಬಿಜೆಪಿ ಎರಡು ಸ್ಥಾನ ಇದ್ದಾಗ ಸಂಘಟನೆ ಮತ್ತು ಜನಪರ ಸೇವೆಯ ಮೂಲಕ ಜನರ ವಿಶ್ವಾಸಗಳಿಸಿ ಪಂಚಾಯತಿನಿಂದ ಲೋಕಸಭೆಯವರೆಗೆ ಗೆದ್ದು ಬಂದ ರಾಷ್ಟ್ರೀಯ ಪಕ್ಷವಾಗಿದೆ. ಜನರ ತೀರ್ಪಿಗೆ ಅಪಮಾನ ಮಾಡಬಾರದು. ಚುನಾವಣಾ ಆಯೋಗದ ಇವಿಎಂ ಮೂಲಕ ಚುನಾವಣೆ ನಡೆಸಿದಾಗ ಅದನ್ನೂ ಕಾಂಗ್ರೆಸ್ ಒಪ್ಪಲಿಲ್ಲ. ಮತ ಪತ್ರಗಳ ಮೂಲಕ ಚುನಾವಣೆ ಮಾಡಿರುವ ಈಗ ಈ ವ್ಯವಸ್ಥೆಯಲ್ಲೂ ಅಕ್ರಮ ನಡೆದಿದೆ ಎಂದು ನಿಂದಿಸುತ್ತಿದ್ದಾರೆ. ಕೊರೊನಾ ರೋಗಕ್ಕೆ ನಮ್ಮ ದೇಶದ ವಿಜ್ಞಾನಿಗಳು ಬಹಳ ಶ್ರಮಪಟ್ಟು ಲಸಿಕೆಯನ್ನು ತಯಾರಿಸಿದಾಗಲೂ ನಂಬಲಿಲ್ಲ. ನಮ್ಮ ಹೆಮ್ಮೆಯ ಸೈನಿಕರು ಶತ್ರು ರಾಷ್ಟ್ರಗಳ ಮೇಲೆ ಸರ್ಜಿಕಲ್ ಸ್ಟ್ರೈಕ್ ನಡೆಸಿದಾಗಲೂ ಪುರಾವೆ ಕೊಡಿ ಎಂದು ಕೇಳಿದ್ದರು.
ಕೃಷಿ ಮತ್ತು ರೈತರ ಕ್ಷೇಮಕ್ಕಾಗಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಬಿಜೆಪಿ ಸರಕಾರ ಜಾರಿಗೆ ತಂದಿರುವಾಗ ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ನಾವು ಗೋಮಾಂಸ ತಿನ್ನುತ್ತೇವೆ ಎಂದು ಹೇಳಿಕೊಂಡು ಜನರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಶತಮಾನದ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಈ ಹೇಳಿಕೆಗಳು ಶೋಭೆ ತರುವುದಿಲ್ಲ ಎಂದು ಹೇಳಿದರು.
ಪಾಕಿಸ್ತಾನ ಮತ್ತು ಚೀನಾ ದೇಶದ ವಕ್ತಾರರಂತೆ ಮಾತನಾಡುವ ಕಾಂಗ್ರೆಸ್ಸಿಗರಿಗೆ ಪಾಕಿಸ್ತಾನದ ಪರ ಘೋಷಣೆ ಕೂಗಿದವರ ವಿರುದ್ಧ ಖಂಡಿಸುವ ಧೈರ್ಯವನ್ನೂ ಕಳೆದುಕೊಂಡಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ, ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜರವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಜನರು ಗ್ರಾ.ಪಂ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ನಾವು ಮಾತ್ರ ಅಧಿಕಾರ ನಡೆಸಬೇಕು ಎಂಬ ಮನಸ್ಥಿತಿಯಲ್ಲಿರುವ ಕಾಂಗ್ರೆಸ್ಸಿಗರಿಗೆ ಸುಳ್ಳು ಹೇಳುವ ಚಪಲ ಎಮದು ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಜಯಂತ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್ ಧರ್ಮಸ್ಥಳ, ಉಪಾಧ್ಯಕ್ಷ ಸೀತಾರಾಮ ಬಿ.ಎಸ್ ಬೆಳಾಲು, ಜಿಲ್ಲಾ ಉಪಾಧ್ಯಕ್ಷ ಹಾಗೂ ಜಿ.ಪಂ ಸದಸ್ಯ ಕೊರಗಪ್ಪ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಹಾಗೂ ತಾ.ಪಂ ಸದಸ್ಯೆ ಧನಲಕ್ಷ್ಮೀ ಜನಾರ್ದನ, ಮಾಧ್ಯಮ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ಉಪಸ್ಥಿತರಿದ್ದರು.