ಕೃಷಿ ಪದ್ಧತಿಯ ಬದಲಾವಣೆಯಿಂದ ನೀರಿನ ಅಭಾವ :ಶಾಸಕ ಹರೀಶ್ ಪೂಂಜ
ಉಜೀರೆ: : ಹಿಂದಿನ ಕಾಲದ ಭತ್ತದ ಗದ್ದೆಗಳಲ್ಲಿ ಇಂದು ವಾಣಿಜ್ಯ ಬೆಳೆಗಳು ಕಾಲಿಟ್ಟಿವೆ, ಕೆರೆ- ಬಾವಿಗಳಿದ್ದಲ್ಲಿ ಈಗ ಕೊಳವೆಬಾವಿಗಳು ತಲೆ ಎತ್ತಿವೆ,ಕೃಷಿ ಪದ್ಧತಿಯಲ್ಲಿ ಉಂಟಾಗುತ್ತಿರುವ ಈ ಬದಲಾವಣೆಗಳಿಂದ ನೀರಿನ ಅಭಾವ ಎದುರಾಗುತ್ತಿದೆ, ಇದನ್ನು ತಡೆಯಲು ತಾಲೂಕಿನಾದ್ಯಂತ ಕಿಂಡಿ ಅಣೆಕಟ್ಟುಗಳ ನಿರ್ಮಾಣ ಯೋಜನೆ ಕೈಗೊಳ್ಳಲಾಗಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಜ .17 ರಂದು ನೆರಿಯ, ಮುಂಡಾಜೆ, ಕನ್ಯಾಡಿ, ಕಳೆಂಜ ಮೊದಲಾದ ಗ್ರಾಮಗಳಲ್ಲಿ 11.5 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟುಗಳಿಗೆ ಶಿಲಾನ್ಯಾಸ ನೆರವೇರಿಸಿ, ಮುಂಡಾಜೆ ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು . ಮುಂದಿನ ದಿನಗಳಲ್ಲಿ ತಾಲೂಕಿಗೆ ಕಿಂಡಿ ಅಣೆಕಟ್ಟುಗಳ ಸಹಿತ ಇನ್ನಷ್ಟು ಕಾಮಗಾರಿಗಳ ಬೇಡಿಕೆಯನ್ನು ಸರಕಾರದ ಮುಂದಿಡಲಾಗುವುದು ಹಾಗೂ ಹಂತ ಹಂತವಾಗಿ ಇನ್ನಷ್ಟು
ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಲಾಗುವುದು ಎಂದು ಹೇಳಿದರು.
ಜಿ.ಪಂ ಸದಸ್ಯರಾದ ಕೊರಗಪ್ಪ ನಾಯ್ಕ್, ಸೌಮ್ಯಲತಾ ಜಯಂತ ಗೌಡ, ತಾಪಂ ಸದಸ್ಯರಾದ ಕೊರಗಪ್ಪ ಗೌಡ, ಲೀಲಾವತಿ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತಭಟ್, ಎಸ್.ಟಿ.ಮೋರ್ಚಾದ ಜಿಲ್ಲಾಧ್ಯಕ್ಷ ಚೆನ್ನಕೇಶವ ಅರಸಮಜಲು, ತಾಲೂಕು ರೈತ ಮೋರ್ಚಾ ಅಧ್ಯಕ್ಷ ಜಯಂತ ಗೌಡ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಬಾಬು ಗೌಡ, ಹಿರಿಯ ಸಹಕಾರಿ ಎನ್. ಎಸ್. ಗೋಖಲೆ, ಅಡೂರು ವೆಂಕಟ್ರಾಯ, ವಿಶ್ವನಾಥ ಬೆಂಡೆ, ವಿಶ್ವನಾಥ ಶೆಟ್ಟಿ, ಜಗದೀಶ ಫಡ್ಕೆ ಮೊದಲಾದವರು ಉಪಸ್ಥಿತರಿದ್ದರು.
ಕಿಂಡಿ ಅಣೆಕಟ್ಟು ಅನುಷ್ಠಾನ ಸಮಿತಿಯ ಗಜಾನನ ವಝೆ ಸ್ವಾಗತಿಸಿದರು, ನಿವೃತ್ತ ಪ್ರಾಧ್ಯಾಪಕ ಗೋಪಾಲ ಪಟವರ್ಧನ್ ವಂದಿಸಿದರು.