ಕಣಿಯೂರು: ಮೂಲ್ಯರ ಯಾನೆ ಕುಲಾಲರ ಸೇವಾ ಸಂಘ ಕಣಿಯೂರು ಇದರ ಆಶ್ರಯದಲ್ಲಿ ‘ಕೃಷಿಯಲ್ಲಿ ಕಸಿ’ ಮಾಹಿತಿ ಕಾರ್ಯಕ್ರಮ ಸಂಘದ ಅಧ್ಯಕ್ಷ ಉಮೇಶ್ ಪಿಲಿಗೂಡು ಅಧ್ಯಕ್ಷತೆಯಲ್ಲಿ ಜರುಗಿತು.
ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ವೀರಪ್ಪ ಸಾಲ್ಯಾನ್ ಮಾತನಾಡಿ, ಕೃಷಿಯಲ್ಲಿ ಹಳೆಯ ಪದ್ಧತಿಯ ಬದಲಿಗೆ ಆಧುನಿಕ ತಂತ್ರಜ್ಞಾನವನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ಪಡೆದು ಹೆಚ್ಚಿನ ಲಾಭ ಗಳಿಸಬಹುದು. ಸೂರ್ಯನ ಬಿಸಿಲು ಬೀಳುವ ಪ್ರದೇಶದಲ್ಲಿ ಗಿಡಗಳನ್ನು ನೆಡಬೇಕು, ತೆಂಗು ಅಡಿಕೆಯ ಎಲೆ ಬಾಗುವ ರೋಗಕ್ಕೆ ಸಾಸಿವೆ ಬೆಳ್ಳುಳ್ಳಿಯ ದ್ರಾವಣವನ್ನು ಹಾಕುವ ಬಗ್ಗೆ ಮಾಹಿತಿ ನೀಡಿದರು ಹಾಗೂ ಮಾವಿನ ಗಿಡ, ಗುಲಾಬಿ ಗಿಡಕ್ಕೆ ಕಸಿ ಕಟ್ಟುವುದನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಪರಿಸರವಾದಿಗಳಾದ ದುರ್ಗಾಸಿಂಗ್ ರಜಪೂತ್ ಮತ್ತು ಗಿರೀಶ್ ವಿಟ್ಲ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಕುಲಾಲ ಯುವ ವೇದಿಕೆ ಅಧ್ಯಕ್ಷ ಬಾಲಕೃಷ್ಣ ಹೆಚ್, ಕೃಷಿಕ ಸುಭಾಷ್ ಕೆ.ಎನ್ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎನ್ ಸ್ವಾಗತಿಸಿ, ಜಯಕಾಂತ್ ಪೋಯ್ಯಾಲೆ ಕಾರ್ಯಕ್ರಮ ನಿರೂಪಿಸಿ, ಮಮಿತಾ ಸುಧೀರ್ ಧನ್ಯವಾದವಿತ್ತರು.