ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿ ಚಾಮರಾಜನಗರದ ನವೀನ್ ಪೊಲೀಸ್ ವಶಕ್ಕೆ
ಬೆಳ್ತಂಗಡಿ: ಉಜಿರೆಯ ರಥಬೀದಿಯಲ್ಲಿರುವ ತನ್ನ ಮನೆಯೆದುರು ಆಟವಾಡುತ್ತಿದ್ದ ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 6 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ತಲೆಮರೆಸಿಕೊಂಡಿದ್ದ ಇನ್ನೋರ್ವ ಆರೋಪಿಯನ್ನು ಬೆಳ್ತಂಗಡಿ ಪೋಲೀಸರು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಭಾಗಿಯಾದ ಮತ್ತೋರ್ವ ಆರೋಪಿ ಚಾಮರಾಜನಗರ ನಿವಾಸಿ ನವೀನ್(28.ವ) ರವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟನೆಯ ವಿವರ: ಉಜಿರೆಯ ರಥಬೀದಿಯ ನಿವಾಸಿ, ಉಜಿರೆಯಲ್ಲಿ ಉದ್ಯಮವನ್ನು ನಡೆಸುತ್ತಿರುವ ಬಿಜೋಯ್ ಅವರ ಪುತ್ರ ಅನುಭವ್( 8ವ)ರವರನ್ನು ಆಟವಾಡುತ್ತಿದ್ದ ಸಂದರ್ಭ ಅಪರಿಚಿತ ವ್ಯಕ್ತಿಗಳ ತಂಡವೊಂದು ಸಿನಿಮಿಯ ಮಾದರಿಯಲ್ಲಿ ಅಪಹರಿಸಿ 17 ಕೋಟಿ ರೂ ಬೇಡಿಕೆ ಇಟ್ಟಿದ್ದರು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು 35 ಗಂಟೆಯೊಳಗೆ ಕೋಲಾರದ ಮನೆಯೊಂದರಲ್ಲಿ ಮಗುವನ್ನು ಪತ್ತೆ ಹಚ್ಚಿ ಸುರಕ್ಷಿತವಾಗಿ ರಕ್ಷಿಸಿ, 6 ಮಂದಿ ಕಿಡ್ನ್ಯಾಪರ್ಗಳಾದ ಮಂಡ್ಯದೇವಲಕರೆ ಗ್ರಾಮದ ರಂಜಿತ್(22ವ), ಮಂಡ್ಯ ಕೋಡಿಕೆರೆ ಗ್ರಾಮದ ಹನುಮಂತು (21ವ), ಮೈಸೂರು ವಡಂತ ಹಳ್ಳಿ ಗ್ರಾಮದ ಗಂಗಾಧರ (25ವ), ಬೆಂಗಳೂರು ದೊಡ್ಡಮ್ಮನ ಹಳ್ಳದ ಕಮಲ್ (22ವ) ಮಲೂರಿನ ಕೊರ್ನಹೊಸಳ್ಳಿಯ ಮಂಜುನಾಥ್(24ವ), ಮತ್ತು ಮಹೇಶ್( 26ವ)ರನ್ನು ಡಿ.19 ರಂದು ಬಂಧಿಸಿ, ಮಾಲೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.