ಬೆಳ್ತಂಗಡಿ: ಕೇಂದ್ರ , ರಾಜ್ಯ ಸರ್ಕಾರಗಳು ಜಾರಿ ಮಾಡುತ್ತಿರುವ ನೂತನ ಕೃಷಿ ಮಸೂದೆಗಳು ರೈತ ವಿರೋಧಿಯಾಗಿದ್ದು, ಬಹುರಾಷ್ಟ್ರೀಯ ಕಂಪನಿಗಳ ಪರವಾಗಿದೆ ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಕಂಪನಿಗಳ ಗುಲಾಮಗಿರಿಗೆ ಒಳಗಾಗಿದೆ ಎಂದು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ.೮ ರಂದು ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನೂತನ ಕೃಷಿ ಮಸೂದೆಗಳನ್ನು ವಾಪಸ್ಸಾತಿಗಾಗಿ ದೆಹಲಿಯಲ್ಲಿ ರೈತರು ನಡೆಸುತ್ತಿರುವ 45 ದಿನಗಳ ಹೋರಾಟ ಐತಿಹಾಸಿಕವಾದುದು. ಕೃಷಿ ಆಧಾರಿತ ದೇಶದಲ್ಲಿ ದೇಶದ ಬೆನ್ನೆಲುಬಾಗಿರುವ ಕೃಷಿಕರ ಬೆನ್ನೆಲುಬು ಮುರಿಯುವ ಕಾಯಿದೆಗಳನ್ನು ಜಾರಿ ಮಾಡುತ್ತಿರುವುದು ನಮ್ಮ ದುರಂತ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಮಾಲೀಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಈ ಸರ್ಕಾರಗಳು ರೈತ- ಕಾರ್ಮಿಕರ ವಿರೋಧಿಯಾಗಿ ವರ್ತಿಸುತ್ತಿದೆ. ಈ ಫ್ಯಾಸಿಸ್ಟ್, ಸರ್ವಾಧಿಕಾರಿ ಧೋರಣೆಯ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ ಎಂದರು.
ಸಿಐಟಿಯು ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಶೇಖರ್ ಎಲ್ ಮಾತನಾಡಿ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದ ದುಡಿಯುವ ವರ್ಗ ಬೀದಿಗೆ ಬೀಳುವ ಹಂತ ತಲುಪಿದೆ. ರೈತ ಸಮುದಾಯದ ಚಳವಳಿ ಜಗತ್ತಿನಾದ್ಯಂತ ನಮ್ಮ ದೇಶವು ತಲೆತಗ್ಗಿಸುವಂತಾಗಿದೆ. ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲಾಗುತ್ತಿದೆ. ರೈತ- ಕಾರ್ಮಿಕ ಪರವಾದ ಕಾನೂನುಗಳು ಮಾಲೀಕರ ಪರವಾಗಿ ಬದಲಾವಣೆ ಮಾಡುವ ಮೂಲಕ ಬಿಜೆಪಿ ಸರ್ಕಾರಗಳು ಮಾಲೀಕ ವರ್ಗದ ಗುಮಾಸ್ತರಾಗಿ ಬದಲಾಗಿದೆ ಎಂದು ಆರೋಪಿಸಿದರು. ದೆಹಲಿ ರೈತ ಚಳವಳಿಯನ್ನು ಸಿಐಟಿಯು ಬೆಂಬಲ ವ್ಯಕ್ತಪಡಿಸುತ್ತದೆ ಎಂದ ಅವರು ರೈತರು ಬೆಳೆದ ಅನ್ನ ತಿನ್ನುವ ಪ್ರತಿಯೊಬ್ಬರೂ ರೈತರ ಹೋರಾಟ ಬೆಂಬಲಿಸುವ ಅಗತ್ಯವಿದೆ ಎಂದರು.
ಸಿಐಟಿಯು ನಾಯಕಿ ಸುಕನ್ಯಾ ಹೆಚ್, ಸುಧಾ ಕೆ ರಾವ್, ಕುಸುಮ ಮಾಚಾರ್, ಶಶಿಕಲಾ ಪಣಕಜೆ , ಶ್ರಮಶಕ್ತಿ ಸ್ವಸಹಾಯ ಗುಂಪಿನ ಸಂಚಾಲಕ ಸಂಜೀವ ಆರ್, ಯುವ ನಾಯಕ ಸುಜಿತ್ ಉಜಿರೆ, ಎಸ್ಎಫ್ಐ ಮುಖಂಡ ಸುಹಾಸ್ ಬೆಳ್ತಂಗಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆಯ ಬಳಿಕ ಬೆಳ್ತಂಗಡಿ ಉಪ ತಹಶಿಲ್ದಾರ್ ಶಂಕರ್ ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.