ವೇಣೂರು: ವೇಣೂರು, ಅಳದಂಗಡಿ ಹಾಗೂ ನಾರಾವಿ ಪರಿಸರದಲ್ಲಿ ಜ.6 ರಂದು ರಾತ್ರಿ ನಾಲ್ಕು ತಾಸಿಗೂ ಅಧಿಕ ಸಮಯ ಸುರಿದ ಅಕಾಲಿಕ ಮಳೆಯಿಂದ ಕೃಷಿ ಬೆಳೆಗೆ ಅಪಾರ ಹಾನಿಯಾಗಿರುವ ಬಗ್ಗೆ ಕೃಷಿಕರು ವ್ಯಾಪಕವಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಭಾರೀ ಮಳೆಯಿಂದ ಪ್ರಮುಖವಾಗಿ ಈ ಭಾಗದ ಅಡಿಕೆ ಬೆಳೆಗಾರರು ನಷ್ಟ ಅನುಭವಿಸುವಂತಾಗಿದೆ. ಒಣಗಲು ಹಾಕಿದ್ದ ಅಡಿಕೆ ಒದ್ದೆಯಾಗಿ ನಷ್ಟ ಅನುಭವಿಸಿದರೆ ಕೆಲ ಮನೆಗಳ ಅಂಗಲದಲ್ಲಿ ಒಣಗಲು ಹಾಕಲಾಗಿದ್ದ ಅಡಿಕೆ ನೀರಿನಲ್ಲಿ ತೇಲಿ ಹೋಗಿದೆ.
ಸಾಮಾನ್ಯವಾಗಿ ಅಡಿಕೆ ಇದೀಗ ಎರಡನೇ ಕೊಯ್ಲಿಗೆ ಬಂದಿದ್ದು, ತೋಟದಲ್ಲಿ ಬಿದ್ದಿರುವ ಬಹಳಷ್ಟು ಅಡಿಕೆಗಳು ಅನಿರೀಕ್ಷಿತ ಮಳೆಗೆ ಕೊಚ್ಚಿಕೊಂಡು ಹೋಗಿರುವ ಬಗ್ಗೆ ರೈತರು ಮಾಹಿತಿ ನೀಡಿದ್ದಾರೆ. ಅಲ್ಲದೆ ಅಡಿಕೆ ಮರದಲ್ಲಿರುವ ಅಡಿಕೆಗೂ ವಿವಿಧ ರೋಗ ಬಾಧೆ ತಗುಲುವ ಆತಂಕವನ್ನು ರೈತರು ವ್ಯಕ್ತಪಡಿಸಿದ್ದಾರೆ. ಸಿಡಿಲು ಮಳೆಯಿಂದ ರಾತ್ರಿಯಿಡೀ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು.
ಪ್ರಗತಿಪರ ಕೃಷಿಕ ಗುಂಡೂರಿ ಗ್ರಾಮದ ಹರೀಶ್ ಕುಮಾರ್ ಅವರು ಹೇಳುವ ಪ್ರಕಾರ ತಮ್ಮ ಅಂಗಲದಲ್ಲಿ ಸುಮಾರು 10 ಕ್ವಿಂಟಾಲಿನಷ್ಟು ಅಡಿಕೆ ಒಣಗಲು ಹಾಕಲಾಗಿದ್ದು, ಪೂರ್ತಿ ಒಣಗಿತ್ತು. ಇನ್ನೇನು ತೆಗೆಯಬೇಕು ಅನ್ನುವಷ್ಟರಲ್ಲಿ ರಾತ್ರಿಯೇ ಮಳೆ ಸುರಿದಿದೆ. ಗುಡ್ಡದಿಂದ ಅಂಗಲಕ್ಕೆ ಬಂದ ನೀರಿನಿಂದಾಗಿ ಸುಮಾರು ಒಂದು ಕ್ವಿಂಟಾಲಿನಷ್ಟು ಅಡಿಕೆ ನೀರಿನಲ್ಲಿ ಕೊಚ್ಚಿ ಹೋಗಿ ನಷ್ಟ ಆಗಿದೆ ಎಂದಿದ್ದಾರೆ.
ಭತ್ತದ ಬೆಳೆಯೂ ನಷ್ಟ
ಅನಿರೀಕ್ಷಿತ ಮಳೆಯಿಂದ ನೂರಾರು ಮಂದಿ ಅನ್ನದಾತರು ಕೂಡಾ ನಷ್ಟಕ್ಕೊಳಗಾಗಿದ್ದಾರೆ. ಮಳೆಯಿಂದ ಭತ್ತದ ತೆನೆಯಲ್ಲಿ ಹುಳು ಬೀಳುವ ಸಂಭವ ಹೆಚ್ಚಾಗಿದ್ದು, ಪೆರಾಡಿ, ಮರೋಡಿ, ಕೆದ್ದು, ಬಡಕೋಡಿ, ಮುಂತಾದ ಗ್ರಾಮಗಳ ಭತ್ತದ ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಂಪ್ರದಾಯಿಕ ಕಟ್ಟಗಳಿಗೆ ಹಾನಿ
ರೈತರು ತಮ್ಮ ತೋಟ, ಗದ್ದೆಗಳಿಗೆ ನೀರುಣಿಸಲು ಅಲ್ಲಲ್ಲಿ ನಿರ್ಮಿಸಲಾಗಿರುವ ಸಾಂಪ್ರದಾಯಿಕ ಕಟ್ಟಗಳು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅಪಾರ ಶ್ರಮ ವ್ಯಕ್ತವಾಗಿದೆ. ತೋಡು, ಹೊಳೆಗಳಲ್ಲಿ ನೀರು ಉಕ್ಕಿ ಹರಿದು ಹಲವು ಕಟ್ಟಗಳಿಗೆ ಹಾನಿಯಾಗಿದೆ.