ವೇಣೂರು: ಬೆಳ್ತಂಗಡಿ ತಾಲೂಕಿನ ನಾರಾವಿ ಮುಖ್ಯಪೇಟೆಯಲ್ಲಿರುವ ದಿನಸಿ ಅಂಗಡಿಗೆ ಇಂದು(ಜ.7) ಮುಂಜಾನೆ ನಕ್ಸಲ್ ನಿಗ್ರಹ ದಳದ ಬೊಲೆರೊ ವಾಹನ ನಿಯಂತ್ರಣ ತಪ್ಪಿ ದಿನಸಿ ಅಂಗಡಿಗೆ ನುಗ್ಗಿ ಮಹಿಳೆಯೋರ್ವರು ಗಾಯಗೊಂಡಿದ್ದಾರೆ.
ಕರ್ತವ್ಯ ನಿಮಿತ್ತ 4 ಮಂದಿ ಕಾರ್ಕಳ ಸಕ್ಸಲ್ ನಿಗ್ರಹ ದಳದ ಪೊಲೀಸರು ಕಾರ್ಕಳದಿಂದ ಮಡಿಕೇರಿ ಕಡೆಗೆ ಹೊರಟಿದ್ದರು ಎನ್ನಲಾಗಿದೆ. ಬೆಳಿಗ್ಗೆ 9.30ರ ಸುಮಾರಿಗೆ ಬೊಲೆರೊ ವಾಹನದ ಬೂಸ್ಟರ್ ಸಮಸ್ಯೆಯಿಂದಾಗಿ ನಿಯಂತ್ರಣ ತಪ್ಪಿ ನೋಡುನೋಡುತ್ತಿದ್ದಂತೆ ನಾರಾವಿಯಲ್ಲಿರುವ ಕುತ್ಲೂರು ರಮೇಶ್ ಪೂಜಾರಿ ಅವರ ಮಾಲಕತ್ವದ ದಿನಸಿ ಅಂಗಡಿಯೊಳಗೆ ನುಗ್ಗಿದೆ.
ಅಂಗಡಿಯಲ್ಲಿದ್ದ ಈದು ನಿವಾಸಿ ಶಾಂತಾ (58) ಅವರಿಗೆ ಗಾಯವಾಗಿದ್ದು, ಮಂಗಳೂರು ಆಸ್ಪತ್ರೆಗೆ ಸಾಗಿಸಲಾಗಿದೆ. ಅಂಗಡಿ ಮಾಲಕರು ಅಪಾಯದಿಂದ ಪಾರಾಗಿದ್ದಾರೆ. ಅಂಗಡಿಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದು, ವೇಣೂರು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.