ಸಂಸ್ಕಾರ, ಸಂಸ್ಕೃತಿ ಸಮಾಜ ಸೇವೆಯಿಂದ ನೆಮ್ಮದಿ –ಸಹನ ಕುಂದರ್
ಉಜಿರೆ: ಸಂಸ್ಕಾರ, ಸಂಸ್ಕೃತಿಗಳ್ನೊಳಗೊಂಡ ಸಮಾಜ ಸೇವೆಯಿಂದ ನೆಮ್ಮದಿ ಜೀವನ ಸಾಧ್ಯ ಇದಕ್ಕೆ ವೀರಕೇಸರಿ ಸಂಘಟನೆಯವರು ಮಾಡಿರುವ ಸೇವೆಯೇ ಸಾಕ್ಷಿ ಎಂದು ವಕೀಲೆ ಪ್ರಖರವಾಗ್ಮಿ ಸಹನಾ ಕುಂದರ್ ಸೂಡ ಹೇಳಿದರು.
ಅವರು ಜ 6ರಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವೀರಕೇಸರಿ ಬೆಳ್ತಂಗಡಿಯ 125ನೇ ಯೋಜನೆಯಾದ ಉಜಿರೆ ಗ್ರಾಮದ ಓಡಲ ಕೋಡಿಜಾಲು ಅಕ್ಕಮ್ಮ ಕುಟುಂಬಸ್ಥರಿಗೆ ನಿರ್ಮಿಸಿಕೊಟ್ಟಿರುವ ನೂತನ ಮನೆ ಹಸ್ತಾಂತರ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡುತ್ತಾ ಹೇಳಿದರು.
ವೀರಕೇಸರಿ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಯುವಕರಿಗೆ ತಮ್ಮ ಗುರಿ, ಛಲವನ್ನು ಸಾಧಿಸಿ ಸಮಾಜ ಸೇವೆ ಮಾಡಲು ಇನ್ನಷ್ಟು ಶಕ್ತಿ ಪ್ರೇರಣೆ ಲಭಿಸಲಿ ಇವರ ಸಾಧನೆಯು ರಾಷ್ಟ್ರ, ವಿಶ್ವ ಮಟ್ಟದಲ್ಲಿ ಪ್ರಸರಿಸಲಿ ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕಾರ್ಯಕಾರಿಣಿ ಸದಸ್ಯ ಗೀತಾಂಜಲಿ ಸುವರ್ಣರು ಮಾತನಾಡುತ್ತಾ ಸಮಾಜಕ್ಕೆ ಏನಾದರೂ ನೀಡಬೇಕು ಎಂಬ ಉದ್ದೇಶ ಇದ್ದಲಿ ಯಾವುದಾದರೂ ಕೆಲಸ ಮಾಡಿ ತೋರಿಸಬಹುದು ಎಂಬುದಕ್ಕೆ ವೀರಕೇಸರಿ ಸಂಘಟನೆಯೇ ಸಾಕ್ಷಿ. ಒಂದೇ ಮನಸ್ಸಿನಿಂದ ಎಲ್ಲರ ಒಮ್ಮತ ನಿರ್ಧಾರದಿಂದ ಎಲ್ಲಾ ಯೋಜನೆಗಳನ್ನೂ ಯಶಸ್ವಿಯಾಗಿ ಮಾಡಬಹುದು. ವೀರಕೇಸರಿ ಯುವಕರು ತಾವು ದುಡಿದ ಸಂಪಾದನೆಯಲ್ಲಿ ಉಳಿಸಿ ಇಂತಹ ಸಮಾಜ ಸೇವೆಯ ಮೂಲಕ ಬಡವರ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಸಮಾರಂಭದಲ್ಲಿ ಕನ್ಯಾಡಿಯ ಸಮಾಜ ಸೇವಕ ಪ್ರಭಾಕರ್ ಸಿ.ಜೆ ಮಧುಗಿರಿಯ ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರ ಕೃಷ್ಣಮೂರ್ತಿ ಕೆ ಕಲ್ಮಂಜ ಗ್ರಾ. ಪಂ ಮಾಜಿ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ಉಜಿರೆ ಆರ್. ಎಂ ಅರ್ಥ್ಮೂವರ್ಸ್ನ ಉದ್ಯಮಿ ರವಿ ಚಕ್ಕಿತ್ತಾಯ, ಕನ್ಯಾಡಿ ಪ್ರಸಾದ್ ಅಲ್ಯುಮಿನಿಯಂ ಫ್ಯಾಭ್ರಿಕೇಷನ್ನ ಉದ್ಯಮಿ ದೇವಿಪ್ರಸಾದ್ ಬರಮೇಲು, ಉಜಿರೆಯ ಉದ್ಯಮಿ ಹಳ್ಳಿಮನೆ ಪ್ರವೀಣ್, ಬಜರಂಗದಳ ಕಾಪು ಸಂಚಾಲಕ ಸಯಧೀರ್ ಸೋನು, ಭಾಜಪ ಜಿಲ್ಲಾ ಯು ಮೋರ್ಚಾ ಅಧ್ಯಕ್ಷ ಗುರುದತ್ ನಾಯಕ್, ಭಾಜಪ ಯುವ ಮೋರ್ಚಾ ತಾಲೂಕು ಅಧ್ಯಕ್ಷ ಯಶವಂತ ಗೌಡ ಬೆಳಾಲು, ಬೆಂಗಳೂರಿನ ವಿಶ್ವ ಪಾಂಡವರ ಸೇನೆಯ ರಾಮು ಬಿ ಟಿ ಎನ್, ಉಜಿರೆ ಉದ್ಯಮಿ ತ್ರಿಶೂಲ್ ಎಂಟರ್ ಪ್ರೈಸಸ್ನ ರಾಜೇಶ್, ಧರ್ಮಸ್ಥಳ ಗ್ರಾಮ ಪಂಚಾಯತ್ ಸದಸ್ಯ ಹರೀಶ್ ಸುವರ್ಣ ಕನ್ಯಾಡಿ II, ಶ್ರೀರಾಮ್ ಅರ್ಥ್ಮೂವರ್ಸ್ನ ಸುನೀಲ್ ಕನ್ಯಾಡಿ, ವಿಶ್ವನಾಥ ಶೆಟ್ಟಿ ಪಡುಬೆಳ್ಳೆ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.
ವಿಜಯ ಗೌಡ ಅತ್ತಾಜೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ‘ಹಳ್ಳಿಮನೆ’ ಪ್ರವೀಣ್ ಅಕ್ಕಮ್ಮ ಕುಟುಂಬಸ್ಥರಿಗೆ ಗ್ಯಾಸ್ ಸ್ಟವ್, ಮಿಕ್ಸಿ, ಗೋಡೆ ಗಡಿಯಾರ ಹಸ್ತಾಂತರಿಸಿದರು. ಕಾರ್ಯಕ್ರಮದ ಮೊದಲು ಗಣಹೋಮ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು.
ವೀರಕೇಸರಿ ಸ್ಥಾಪಕ ಸಂಚಾಲಕ ಸತೀಶ್ ಶೆಟ್ಟಿ, ಪದ್ಮನಾಭ ಪೂಜಾರಿ, ಪವನ್ ಪ್ರಭು, ಸುಧಾಕರ ಗೌಡ, ಅಭಿಷೇಕ್ಭಟ್ ಸೇರಿದಂತೆ ವೀರಕೇಸರಿ ತಂಡದ ಎಲ್ಲಾ ಸದಸ್ಯರು ಸಹಕರಿಸಿದರು.