ಬೆಳ್ತಂಗಡಿ ಠಾಣೆಯ ಹೆಡ್‌ ಕಾನ್ಸ್‌ಟೇಬಲ್ ವೆಂಕಟೇಶ್ ನಾಯ್ಕ್‌ ಗೆ ಮುಖ್ಯಮಂತ್ರಿ ಪದಕ

ಬೆಳ್ತಂಗಡಿ: ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವ ರೀತಿಯಲ್ಲಿ ಪ್ರಕರಣದ ತನಿಖಾ ಸಹಾಯಕರಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ‌ಬೆಳ್ತಂಗಡಿ ವೃತ್ತನಿರೀಕ್ಷಕರ ಕಚೇರಿಯಲ್ಲಿ ಕಳೆದ 6 ವರ್ಷಗಳಿಂದ ಹೆಡ್ ಕಾನ್ಸ್‌ಟೇಬಲ್ ಆಗಿರುವ ವೆಂಕಟೇಶ್ ನಾಯ್ಕ್ ಅವರಿಗೆ ಈ ಬಾರಿಯ ಮುಖ್ಯಮಂತ್ರಿ ಪದಕ ಲಭಿಸಿದೆ.

ಮೂಲತಃ ಮಂಗಳೂರು ತಾಲೂಕು ಕೊಂಪದವು‌ ರುಕ್ಮಯ್ಯ ನಾಯ್ಕ್ ಮತ್ತು ಗೋಪಿ ದಂಪತಿ ಪುತ್ರರಾಗಿರುವ ವೆಂಕಟೇಶ್ ನಾಯ್ಕ್ ಅವರು 1996 ರಲ್ಲಿ ಪೊಲೀಸ್‌ ಇಲಾಖೆಗೆ ಸೇರ್ಪಡೆಗೊಂಡು ಉಡುಪಿ ಸಂಚಾರ ಠಾಣೆ, ಉಪ್ಪಿನಂಗಡಿ ಠಾಣೆ, ವಿಟ್ಲ ಠಾಣೆ ಯಲ್ಲಿ ಕರ್ತವ್ಯ ಸಲ್ಲಿಸಿ 2014 ರಲ್ಲಿ ಹೆಡ್ ಕಾನ್ಸ್‌ಟೇಬಲ್ ಆಗಿ ಪದೋನ್ನತಿ ಹೊಂದಿ ಬೆಳ್ತಂಗಡಿ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ.

ಉಜಿರೆ ಎಸ್.ಆರ್ ಬಾರ್ ಎದುರು ನಡೆದ‌ ಕೊಲೆ ಪ್ರಕರಣ, ಕೊಯ್ಯೂರು, ವೇಣೂರು, ಲಾಯಿಲದಲ್ಲಿ ‌ನಡೆದಿದ್ದ ಪೋಕ್ಸೋ‌ ಪ್ರಕರಣ, ಮರೋಡಿ ಲೈಂಗಿಕ ಹಲ್ಲೆ ಪ್ರಕರಣ, ವಿಟ್ಲದಲ್ಲಿ ನಡೆದಿದ್ದ ಕೊಲೆ ಪ್ರಕರಣ, ಉಜಿರೆ ಅಪಘಾತದಲ್ಲಿ‌ ಶಿಕ್ಷಕಿ ಸಾವು ಪ್ರಕರಣ ಸೇರಿದಂತೆ ಇಂತಹಾ ಗಂಭೀರ ಅಪರಾಧ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಆರೋಪಿಗಳಿಗೆ‌ ನ್ಯಾಯಾಲಯದಿಂದ ಶಿಕ್ಷೆಯಾಗುವಂತೆ ಕರ್ತವ್ಯ ಸಲ್ಲಿಸಿದ್ದನ್ನು ಪರಿಗಣಿಸಿ ಅವರನ್ನು ಈ‌ ಪದಕಕ್ಕೆ ಆಯ್ಕೆಗೊಳಿಸಲಾಗಿದೆ.

ವೆಂಕಟೇಶ್ ನಾಯ್ಕ್ ಅವರಿಗೆ ಈ ಮೊದಲೇ ಇಲಾಖೆಯಿಂದ 17 ಬಾರಿ ನಗದು ಪುರಸ್ಕಾರ, 10 ಬಾರಿ ಪ್ರಶಂಸನಾ ಪತ್ರ, ಉತ್ತಮ ತನಿಖಾ ಸಹಾಯಕ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಲಭಿಸಿವೆ.
ವೆಂಕಟೇಶ್ ನಾಯ್ಕ ಅವರ ಪತ್ನಿ ವಸಂತಿ ಮಂಡಾಜೆ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು,‌ ಪುತ್ರಿ ವರ್ಷಿಣಿ ಅನುಗ್ರಹ ಶಾಲೆಯಲ್ಲಿ 10ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.