3 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ
ಉಜಿರೆ: ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶದ ಪ್ರಯುಕ್ತ ಉಜಿರೆ ಎಸ್ಡಿಎಂ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದ ಸಂದರ್ಭ ಎಸ್ಡಿಪಿಐ ಕಾರ್ಯಕರ್ತರು ಪಾಕಿಸ್ಥಾನದ ಪರ ಘೋಷಣೆ ಕೂಗಿದ ಹಿನ್ನೆಲೆಯಲ್ಲಿ ಮೂರು ಮಂದಿ ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ಪಿಲಿಚಂಡಿಕಲ್ಲು, ಕುವೆಟ್ಟು ನಿವಾಸಿಗಳಾದ ಮಹಮ್ಮದ್ ಹರ್ಷದ್(22), ದಾವೂದ್(36) ಹಾಗೂ ಇಸಾಕ್( 28) ರವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ನಮ್ಮ ಪಕ್ಷದ ಅಭ್ಯರ್ಥಿಗಳು ಜಯಗಳಿಸುವ ವೇಳೆ ಸಹಜವಾಗಿಯೇ ನಮ್ಮ ಕಾರ್ಯಕರ್ತರು ಉತ್ಸಾಹದಿಂದ ನಮ್ಮ ಪಕ್ಷದ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಈ ಬಗ್ಗೆ ಬಂದ ವೀಡಿಯೋ ಸತ್ಯಕ್ಕೆ ದೂರವಾದುದು. ವೀಡಿಯೋ ತಿರುಚಿ ರಿಪಿಟೀಷನ್ ಮೂಲಕ ಮತ್ತೆ ಮತ್ತೆ ಕೇಳುವಂತೆ ಪ್ರಕಟಿಸಲಾಗಿದೆ. ಮಾದ್ಯಮಗಳು ತೋರಿಸಿದ ಆ ಘೋಷಣೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ.
ನಮ್ಮ ಪಕ್ಷ ದೇಶದ್ರೋಹದ ಕೆಲಸ ಎಂದೂ ಮಾಡುವುದಿಲ್ಲ. ಮತ್ತು ಅದನ್ನು ನಾವು ಕಲಿಸುವುದೂ ಇಲ್ಲ ಎಂದು ಎಸ್.ಡಿ.ಪಿ.ಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಹೈದರ್ ನೀರ್ಸಾಲ್ ಹೇಳಿಕೆ ನೀಡಿದ್ದಾರೆ.
ಆದರೆ ತನಿಖೆ ವೇಳೆ ಘೋಷಣೆ ಕೂಗಿರುವ ವಿಚಾರ ಸ್ಪಷ್ಟವಾಗಿ ಗೋಚರಿಸಿರುವ ವೀಡಿಯೋಗಳು ಲಭ್ಯವಾಗಿದ್ದು, ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಒಂದು ವೇಳೆ ಪ್ರಕರಣ ಸಾಬೀತಾದರೆ ಉದ್ದೇಶಪೂರ್ವಕವಾಗಿ ದೇಶ ದ್ರೋಹ 124(ಎ) ಕಾಯ್ದೆಯಡಿ ಪ್ರಕರಣ ದಾಖಲಾಗಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ದ.ಕ ಜಿಲ್ಲಾ ವರಿಷ್ಠಾಧಿಕಾರಿ ಬಿ.ಎಂ ಲಕ್ಷ್ಮೀ ಪ್ರಸಾದ್ ರವರ ಆದೇಶದ ಮೇರೆಗೆ ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ ಹಾಗೂ ಉಪ ನಿರೀಕ್ಷಕ ನಂದ ಕುಮಾರ್ ತಂಡ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.