ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಜ್ಞಾನದೀಪ ಶಾಲಾ ಶಿಕ್ಷಣ ಕಾರ್ಯಕ್ರಮದ ಅಂಗವಾಗಿ ಕೊಪ್ಪಳ, ಗದಗ, ಭಾಗಲಕೊಟೆ, ಬಳ್ಳಾರಿ, ರಾಯಚೂರು ಮತ್ತು ಹೊಸಪೇಟೆ ಜಿಲ್ಲೆಯ 287 ಶಾಲೆಗಳಿಗೆ 2550 ಜೊತೆ ಪೀಠೋಪಕರಣಗಳ ವಿತರಣೆ ಕಾರ್ಯಕ್ರಮಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಇಂದು (ಡಿ.28) ಧರ್ಮಸ್ಥಳದಲ್ಲಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಪ್ರಸ್ತುತ ವರ್ಷದಲ್ಲಿ ಕೊಪ್ಪಳ ಪ್ರಾದೇಶಿಕ ವ್ಯಾಪ್ತಿಯ 6 ಜಿಲ್ಲೆಯ 287 ಶಾಲೆಗಳಿಗೆ 2550 ಜೊತೆ ಡೆಸ್ಕ್ ಬೆಂಚನ್ನು ಪೂರೈಕೆ ಮಾಡಲಾಗುತ್ತಿದ್ದು, ಒಟ್ಟು 1,78,50,000 ಮೊತ್ತ ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸುಮಾರು 10200 ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ.
ಇದುವರೆಗೆ ಶ್ರೀ ಕ್ಷೇತ್ರದಿಂದ ಪೀಠೋಪಕರಣ ಒದಗಣೆಗೆ ಒಟ್ಟು 29 ಜಿಲ್ಲೆಗಳ 9213 ಶಾಲೆಗಳಿಗೆ 58915 ಜೊತೆ ಡೆಸ್ಕ್ ಬೆಂಚುಗಳನ್ನು ಪೂರೈಕೆ ಮಾಡಿದ್ದು, ಒಟ್ಟು ರೂ 1,59,22,6,000 ವಿನಿಯೋಗಿಸಲಾಗಿದೆ. ಇದರಿಂದಾಗಿ ಸುಮಾರು2,35,666 ವಿದ್ಯಾರ್ಥಿಗಳಿಗೆ ಆಸನದ ವ್ಯವಸ್ಥೆ ಒದಗಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಹೇಮಾವತಿ ವಿ ಹೆಗ್ಗಡೆ, ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್, ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ಸಿರಿ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಜನಾರ್ಧನ್, ಸಮುದಾಯ ವಿಭಾಗ ಯೋಜನಾಧಿಕಾರಿ ಪುಷ್ಪರಾಜ್, ಉಜಿರೆ ಉದ್ಯಮಿ ಮೋಹನ್ ಕುಮಾರ್, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.