ಬೆಳ್ತಂಗಡಿ: ತಾಲೂಕು ಪರಿಶಿಷ್ಟ ವರ್ಗದ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂಘ ಲ್ಯಾಂಪ್ಸ್ ಇದರ ಮಹಾಸಭೆಯು ಡಿ.25 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಲಿಂಗಪ್ಪ ನಾಯ್ಕ್ ಉರುವಾಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಪ್ರಗತಿ ಹೊಂದಲು ಆಡಳಿತ ಮಂಡಳಿ ಸಿಬ್ಬಂದಿ ವರ್ಗ ಠೇವಣಿದಾರರು ಸಂಘದ ಗ್ರಾಹಕರ ವಿಶ್ವಾಸ ಹಾಗೂ ಸಹಕಾರವೇ ಮುಖ್ಯಕಾರಣ. ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಸಂಘದ ಶಾಖೆಗಳನ್ನು ತೆರೆಯಲು ಸಂಘದ ಸದಸ್ಯರಿಂದ ಬೇಡಿಕೆ ಬರುತ್ತಿದ್ದು ಅವುಗಳನ್ನು ಹಿಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹಾಗೂ ಬಡವರಿಗಾಗಿ ಲ್ಯಾಂಪ್ಸ್ ಸಹಕಾರ ಸಂಘದಿಂದ ಸಾಲ ನೀಡಿ ಮತ್ತು ಸರಕಾರದ ಯೋಜನೆಗಳ ಮೂಲಕ ನಂದಗೋಕುಲ ಎಂಬ ಮನೆಯನ್ನು ನಿರ್ಮಿಸಿ ಕೊಡುವ ಯೋಜನೆಯನ್ನು ಕೈಗೊಳ್ಳುವುದಾಗಿ ಸಂಘಕ್ಕೆ ತಿಳಿಸಿದರು.
ಈ ಸಂದರ್ಭದಲ್ಲಿ 20 ವರ್ಷಗಳಿಂದ ಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸುತ್ತಿದ್ದು, ಪ್ರಸ್ತುತ ಅಸ್ಸಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ ನಾಯ್ಕ್ ಕಡಿರುದ್ಯಾವರ ಇವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಕರ್ಮಯೋಗಿ ಪುರಸ್ಕಾರದೊಂದಿಗೆ ಸನ್ಮಾನಿಸಲಾಯಿತು. ಜೊತೆಗೆ ಇವರ ಧರ್ಮಪತ್ನಿ ಸವಿತಾ ಮತ್ತು ಮಕ್ಕಳನ್ನು ಗೌರವಿಸಲಾಯಿತು ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಶ್ರೇಷ್ಠ ಪುರಸ್ಕಾರದೊಂದಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸಲಾಯಿತು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೀನಾ ಕುಮಾರ್ ಲೆಕ್ಕ ಪತ್ರ ಮಂಡಿಸಿದರು. ನಿರ್ದೇಶಕ ಚೆನ್ನಕೇಶವ ನಾಯ್ಕ್ ಅಭಿನಂದನಾ ಪತ್ರ ವಾಚಿಸಿದರು. ಸಭೆಯಲ್ಲಿ ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರು, ಪಿಗ್ಮಿಸಂಗ್ರಹಕಾರರು, ಸಂಘದ ಸದಸ್ಯರು ಭಾಗವಸಿದ್ದರು.
ವಿನುತಾ, ಪ್ರತೀಕ್ಷಾ, ಮಾನ್ಯ ಪ್ರಾರ್ಥಿಸಿ, ಸಂಘದ ಉಪಾಧ್ಯಕ್ಷ ಸಂತೋಷ್ ನಾಯ್ಕ್ ಅತ್ತಾಜೆ ಸ್ವಾಗತಿಸಿದರು. ವಸಂತ ನಾಯ್ಕ್ ಮಾರಿಪದೆ ಧನ್ಯವಾದವಿತ್ತರು. ಶ್ವೇತಾ.ಕೆ ಕಾರ್ಯಕ್ರಮ ನಿರೂಪಿಸಿದರು.