ಬೆಳ್ತಂಗಡಿ: ಡಿ.27ರಂದು ನಡೆಯಲಿರುವ ಬೆಳ್ತಂಗಡಿ ತಾಲೂಕಿನ 46 ಗ್ರಾಮ ಪಂಚಾಯತುಗಳ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಚುನಾವಣಾಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಮಸ್ಟರಿಂಗ್ ಪ್ರಕ್ರಿಯೆಗಳು ಡಿ.26ರಂದು ಬೆಳಗ್ಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭಗೊಂಡಿದೆ.
ಪುತ್ತೂರು ಸಹಾಯಕ ಕಮೀಷನರ್ ಡಾ| ಯತೀಶ್ ಉಲ್ಲಾಳ್, ಅಪರಾ ಜಿಲ್ಲಾಧಿಕಾರಿ ರೂಪ, ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಇವರ ಉಸ್ತುವಾರಿಯಲ್ಲಿ ತಾಲೂಕಿನ ಮತಗಟ್ಟೆಗಳಿಗೆ ಮತದಾನದ ಪರಿಕರಣಗಳನ್ನು ನೀಡಲಾಗುತ್ತಿದೆ. ಬೆಳ್ತಂಗಡಿ ತಾಲೂಕಿನಲ್ಲಿ 12ಅತೀ ಸೂಕ್ಷ್ಮ, 43 ಸೂಕ್ಷ್ಮ ಹಾಗೂ 237 ಸಾಮಾನ್ಯ ಮತಗಟ್ಟೆಗಳಿವೆ. 201 ಮೂಲಮತಗಟ್ಟೆ, 91 ಆಕ್ಸಿಲರಿ ಮತಗಟ್ಟೆ ಸೇರಿ 292ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಯಲ್ಲಿ ಒಬ್ಬ ಅಧೀಕ್ಷಕಾಧಿಕಾರಿ, ಸಹಾಯಕ ಅಧೀಕ್ಷಕಾಧಿಕಾರಿ ಹಾಗೂ ಪ್ರತಿ ವಿಭಾಗಕ್ಕೂ ಸಿಬ್ಬಂದಿಗಳಿದ್ದಾರೆ. ಇವರಿಗೆ ಇಂದು ಬೆಳಗ್ಗೆ ಉಜಿರೆಯಲ್ಲಿ ಮತದಾನಕ್ಕೆ ಬೇಕಾಗುವ ಪರಿಕರಗಳನ್ನು ನೀಡಲಾಗುತ್ತದೆ.
ಪ್ರತಿ ಮತಗಟ್ಟೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೋಗಲು ಕೆಎಸ್ಸಾರ್ಟಿಸಿ, ಹಾಗೂ ಖಾಸಗಿ ಬಸ್, ಜೀಪು ಹಾಗೂ ಇತರ ವಾಹನಗಳ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿ ಬೂತಿಗೆ ಪೊಲೀಸ್, ಹೋಮ್ಗಾರ್ಡ್ಗಳನ್ನು ನಿಯೋಜನೆ ಮಾಡಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಎಎನ್ಎಫ್ ಪೊಲೀಸರನ್ನು ಹಾಕಲಾಗಿದೆ.