46 ಗ್ರಾ.ಪಂ.ಗಳ 624 ಸ್ಥಾನಗಳಿಗೆ 1439 ಅಭ್ಯರ್ಥಿಗಳು: 631 ಸ್ಥಾನಗಳಲ್ಲಿ 7 ಮಂದಿ ಅವಿರೋಧವಾಗಿ ಆಯ್ಕೆ
ಮಂಗಳೂರು ಹೊರತು ಪಡಿಸಿದರೆ ದ.ಕ. ಜಿಲ್ಲೆಯಲ್ಲೇ 81 ಗ್ರಾಮಗಳನ್ನು ಹೊಂದಿ ದೊಡ್ಡ ತಾಲೂಕಾಗಿರುವ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 48 ಗ್ರಾಮ ಪಂಚಾಯತ್ಗಳಲ್ಲಿ 46 ಪಂಚಾಯತ್ಗಳಿಗೆ ದ.27ರಂದು ಚುನಾವಣೆ ನಡೆಯಲಿದ್ದು, ಒಟ್ಟು 631 ಸ್ಥಾನಗಳಲ್ಲಿ 7 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದಿರುವ 624 ಸ್ಥಾನಗಳಿಗೆ ಒಟ್ಟು 1439 ಮಂದಿ ಸ್ಪರ್ಧಾಕಣದಲ್ಲಿದ್ದಾರೆ. ತಾಲೂಕಿನ 2 ಲಕ್ಷ 4 ಸಾವಿರದ 205 ಮತದಾರರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ದ.16ರವರೆಗೆ 1729 ಮಂದಿ ನಾಮಪತ್ರ ಸಲ್ಲಿಸಿದ್ದರು. ಅವುಗಳಲ್ಲಿ 53 ನಾಮಪತ್ರಗಳು ತಿರಸ್ಕೃತಗೊಂಡಿದ್ದವು. ಹಿಂತೆಗೆ ತಕ್ಕೆ ಕೊನೆಯ ದಿನವಾದ ದ.19ರೊಳಗೆ 237 ಮಂದಿ ನಾಮಪತ್ರ ಹಿಂತೆಗೆದುಕೊಂಡು 1439ಮಂದಿ ಅಂತಿಮ ಕಣ ದಲ್ಲುಳಿದಿದ್ದಾರೆ.
ದ.27ರಂದು ಆದಿತ್ಯವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ.
ಇದಕ್ಕಾಗಿ ಒಟ್ಟು 292 ಮತಗಟ್ಟೆಗಳನ್ನು ರಚಿಸಲಾಗಿದೆ. ಒಂದು ಮತಗಟ್ಟೆಗೆ ತಲಾ 5 ಮಂದಿಯಂತೆ 1460 ಮಂದಿ ಚುನಾವಣಾ ಸಿಬ್ಬಂದಿ ಸಿದ್ಧರಾಗಿದ್ದು, ದ.26ರಂದು ಮತಗಟ್ಟೆಗೆ ತೆರಳಲಿದ್ದಾರೆ. ಉಜಿರೆಯ ಎಸ್.ಡಿ.ಎಂ ಪದವಿ ಕಾಲೇಜು ಮತ್ತು ಎಸ್.ಡಿ.ಎಂ. ಪಿ.ಯು ಕಾಲೇಜು ಆವರಣದಲ್ಲಿ ಮಸ್ಟರಿಂಗ್, ಡಿ ಮಸ್ಟರಿಂಗ್ ಕಾರ್ಯ ನಡೆಯಲಿದ್ದು, ಅದೇ ಕಾಲೇಜುಗಳಲ್ಲಿ ದ.30ರಂದು ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭಗೊಳ್ಳುವುದು.
ಪಂಚಾಯತ್ವಾರು ಎಣಿಕೆ ಪೂರ್ಣಗೊಳ್ಳುತ್ತಿದ್ದಂತೆ ಫಲಿತಾಂಶ ಘೋಷಿಸಲಾಗುವುದು.
ತಾಲೂಕಿನ 631 ಗ್ರಾ.ಪಂ.ಸ್ಥಾನಗಳ ಪೈಕಿ 6 ಗ್ರಾ.ಪಂ.ಗಳ 7 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕಲ್ಮಂಜ ಗ್ರಾ.ಪಂ. ನ 1, ಪಡಂಗಡಿ ಗ್ರಾ.ಪಂ. 2, ಮಡಂತ್ಯಾರು ಗ್ರಾ.ಪಂ.1, ಮಿತ್ತಬಾಗಿಲು ಗ್ರಾ.ಪಂ-1, ತೆಕ್ಕಾರು ಗ್ರಾ.ಪಂ-1, ಲಾಯಿಲ ಗ್ರಾ.ಪಂ-1 ಸ್ಥಾನ ಅವಿರೋಧವಾಗಿದೆ.
ಕಲ್ಮಂಜ ಗ್ರಾ.ಪಂ.ನ 3ನೇ ವಾರ್ಡಿನ ಹಿಂದುಳಿದ ವರ್ಗ `ಎ’ ಮಹಿಳಾ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಹಿಂತೆಗೆದು ಕೊಂಡಿದ್ದರಿಂದ ಬಿ.ಜೆ.ಪಿ. ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದ ಚಂದ್ರಕಲಾರವರು ನಾಮಪತ್ರ ಸಲ್ಲಿಸಿದ್ದ ಶೋಭಾವತಿ ಆಚಾರ್ಯ ಅವಿರೋಧವಾಗಿ ಆಯ್ಕೆಯಾದರು.
ಪಡಂಗಡಿ ಗ್ರಾ.ಪಂ.ನ ಗರ್ಡಾಡಿ-1ನೇ ವಾರ್ಡಿನ ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಬಿ.ಜೆ.ಪಿ. ಬೆಂಬಲಿತೆ ಸುಮತಿ ಪಿ.ಪೂಜಾರಿಯವರು, ಬೇರೆ ನಾಮಪತ್ರಗಳು ಇಲ್ಲದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಅದೇ ಗ್ರಾ.ಪಂ. ಗರ್ಡಾಡಿ -3ನೇ ವಾರ್ಡಿನ ಪ.ಜಾತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಶಿವಾನಂದ ಎಂಬವರು ನಾಮಪತ್ರ ಹಿಂತೆಗೆದುಕೊಂಡ ಕಾರಣ ಬಿ.ಜೆ.ಪಿ. ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ್ದ ಕೃಷ್ಣಪ್ಪ ಬಂಗಟ ಅವಿರೋಧವಾಗಿ ಆಯ್ಕೆಯಾದರು.
ಮಡಂತ್ಯಾರು ಗ್ರಾ.ಪಂ.ನ ಪಾರೆಂಕಿ-1ನೇ ವಾರ್ಡಿನಿಂದ ಪ.ಜಾತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಗುರುವ ಎಂಬವರ ನಾಮಪತ್ರ ತಿರಸ್ಕೃತಗೊಂಡಿದ್ದರಿಂದ ಬಿ.ಜೆ.ಪಿ ಬೆಂಬಲಿತ ಗೋಪಾಲಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಿತ್ತಬಾಗಿಲು ಗ್ರಾ.ಪಂ.ನ 3ನೇ ವಾರ್ಡಿನ ಪ.ಪಂಗಡ ಮಹಿಳಾ ಮೀಸಲು ಸ್ಥಾನಕ್ಕೆ ಬಿ.ಜೆ.ಪಿ ಬೆಂಬಲಿತರಾದ ಶಾಂಭವಿ ಎಂಬವರ ಏಕೈಕ ನಾಮಪತ್ರ ಬಂದುದರಿಂದ ಅವರು ಅವಿರೋದವಾಗಿ ಆಯ್ಕೆಯಾದರು.
ತೆಕ್ಕಾರು ಗ್ರಾ.ಪಂ.ನ 2ನೇ ವಾರ್ಡಿನ ಪ.ಜಾತಿ ಮಹಿಳಾ ಮೀನಲು ಸ್ಥಾನಕ್ಕೆ ಬಿ.ಜೆಪಿ. ಬೆಂಬಲಿತರಾದ ರಜನಿ ಎಂ.ಆರ್. ರವರ ನಾಮಪತ್ರ ಬಂದಿದ್ದುದರಿಂದ ಅವರು ಅವಿರೋಧವಾಗಿ ಆಯ್ಕೆಯಾದರು.
ಆಯ್ಕೆಯಾದ ಎಲ್ಲರೂ ಬಿ.ಜೆ.ಪಿ ಬೆಂಬಲಿಗರೆನ್ನುವುದು ಮತ್ತು ಕಾಂಗ್ರೆಸ್ನವರಿಗೆ ಅಭ್ಯರ್ಥಿಸಿಗದೆ ಇದ್ದುದು ಉಲ್ಲೇಖನೀಯ ವಿಚಾರ