* ವಿಶ್ವಹಿಂದೂ ಪರಿಷತ್ನ ಕೊಕ್ಕಡ ವಲಯ ಅಧ್ಯಕ್ಷ ನೂಜಿ ತುಕ್ರಪ್ಪ ಶೆಟ್ಟಿಯವರ ಮನೆ
* ಪತ್ನಿ ಗೀತಾ ಶೆಟ್ಟಿಯವರಿಗೆ ಚೂರಿ ಇರಿತ ಆಸ್ಪತ್ರಗೆ ದಾಖಲು
* ಚಿನ್ನಾಭರಣ ಸಹಿತಿ ನಗದು ದರೋಡೆ ಶಂಕೆ: ಸ್ಥಳಕ್ಕೆ ಉತನ್ನತ ಪೊಲೀಸ್ ಅಧಿಕಾರಿಗಳ ಭೇಟಿ ಪರಿಶೀಲನೆ
ಕೊಕ್ಕಡ: ರಾತ್ರಿ ಸಮಯ ಮನೆಯೊಂದಕ್ಕೆ ನುಗ್ಗಿದ 9ಮಂದಿಯ ಕಳ್ಳರ ತಂಡವೊಂದು ಮನೆ ಮಾಲಿಕನನ್ನು ಕಟ್ಟಿಹಾಕಿ ಚಿನ್ನಾಭರಣ ಸೇರಿದಂತೆ ನಗದು ದರೋಡೆಗೈದ ಘಟನೆ ಡಿ.21ರಂದು ವರದಿಯಾಗಿದೆ.
ವಿಶ್ವಹಿಂದೂ ಪರಿಷತ್ನ ಕೊಕ್ಕಡ ವಲಯ ಅಧ್ಯಕ್ಷರೂ ಹಾಗೂ ಸೌತಡ್ಕ ಸಮೀಪದ ಕೌಕ್ರಾಡಿ ಗ್ರಾಮದ ನೂಜಿ ತುಕ್ರಪ್ಪ ಶೆಟ್ಟಿ ಎಂಬವರ ಮನೆಗೆ ನುಗ್ಗಿದ ದರೋಡೆಕೋರರು ಈ ಕೃತ್ಯವನ್ನು ನಡೆಸಿದ್ದಾರೆ. ರಾತ್ರಿ ಸುಮಾರು 12 ಗಂಟೆಯ ವೇಳೆಗೆ ಮನೆಯ ನಾಯಿ ಬೊಗಳಿದಾಗ ಮನೆಯ ಮಹಡಿಯ ಕೊಠಡಿಯಲ್ಲಿ ಮಲಗಿದ್ದ ತುಕ್ರಪ್ಪ ಶೆಟ್ಟಿಯವರು ಬಾಗಿಲು ತೆಗೆದಾಗ ನಾಲ್ಕು ಮಂದಿ ದರೋಡೆಕೋರರು ಅವರನ್ನು ಹಿಡಿದು ಕಟ್ಟಿಹಾಕಿದರೆನ್ನಲಾಗಿದೆ. ನಂತರ ಮನೆಯೊಳಗೆ ನುಗ್ಗಿದ 9 ಮಂದಿ ದರೋಡೆಕೋರರು ಅವರ ಪತ್ನಿ ಗೀತಾ ಶೆಟ್ಟಿಯವರಲ್ಲಿ ಮನೆಯ ಗ್ರೋದೆಜ್ನ ಕೀಯನ್ನು ಕೊಡುವಂತೆ ಕೇಳಿದ್ದರು. ಅವರು ಕೊಡಲು ನಿರಾಕರಿಸಿದಾಗ ಓರ್ವ ದರೋಡೆಕೋರ ಅವರ ಹೊಟ್ಟೆಗೆ ಚೂರಿಯಿಂದ ಇರಿದನೆನ್ನಲಾಗಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಂತರ ಗೋದ್ರೇಜ್ನಲ್ಲಿ ಹುಡಕಾಡಿ ಒಂದು ಬೆಳ್ಳಿ ದೀಪ ಸಹಿತ ಚಿನ್ನಾಭರಣ ಅಪಹರಿಸಿ ಪರಾರಿಯಾದರೆಂದು ತಿಳಿದು ಬಂದಿದೆ. ತುಕ್ರಪ್ಪ ಶೆಟ್ಟಿಯವರಿಗೆ ಮೂವರು ಮಕ್ಕಳಿದ್ದು, ಬೊಬ್ಬೆ ಹಾಕಿದರೆ ನಿಮಗೂ ಚೂರಿ ಹಾಕುವುದಾಗಿ ದರೋಡೆಕೋರರು ಬೆದರಿಸಿದರೆಂದು ತಿಳಿದು ಬಂದಿದೆ. ದರೋಡೆಕೋರರು ಕನ್ನಡದಲ್ಲಿ ಮಾತನಾಡುತ್ತಿದ್ದರೆಂದು ಮನೆಯವರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು, ಉನ್ನತ ಪೊಲೀಸ್ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.