ಕಸ್ತೂರಿರಂಗನ್ ವರದಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಕಳೆಂಜ ಗ್ರಾ.ಪಂ. ಎದುರು ಪ್ರತಿಭಟನೆ
ಕಳೆಂಜ: ಬೆಳ್ತಂಗಡಿ ತಾಲೂಕಿನ 17 ಗ್ರಾಮಗಳು ಸೇರಿಸಲ್ಪಟ್ಟ ಪಶ್ಚಿಮ ಘಟ್ಟ ಸೂಕ್ಷ್ಮ ಪರಿಸರ ಪ್ರದೇಶ ಎಂದು ಗುರುತಿಸಲ್ಪ್ಪಟ್ಟ ಕಸ್ತೂರಿರಂಗನ್ ವರದಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಸಂತ್ರಸ್ತರು ಡಿ.11 ರಂದು ಕಳೆಂಜ ಗ್ರಾಮ ಪಂಚಾಯದ ಮುಂದೆ ಪ್ರತಿಭಟನೆ ನಡೆಸಿದರು.
ಜನ ಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಅವರು ಮಾತನಾಡಿ, ತಲೆತಲಾಂತರದಿಂದ ತಮ್ಮ ಜೀವನಾಡಿಯಾದ ಕೃಷಿಯನ್ನು ತಮ್ಮ ಕುಲ ಕಸುಬಾಗಿ ಮಾಡಿಕೊಂಡು ಜೀವನ ನಡೆಸುತ್ತಿರುವ ಕೃಷಿಕರು ಈ ಯೋಜನೆ ಜಾರಿಯಾದರೆ ಅತಂತ್ರಗೊಂಡು ನಿರ್ಗತಿಕರಾಗುವ ಆತಂಕಕ್ಕೆ ಒಳಗಾಗಿದ್ದಾರೆ. ಈ ಬಗ್ಗೆ ಈಗಾಗಲೇ ಪಂಚಾಯತು ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸಲಾಗಿದೆ. ಗ್ರಾಮ ಸಭೆಗಳಲ್ಲೂ ಜನರ ಅಭಿಪ್ರಾಯವನ್ನು ನಿರ್ಣಯಿಸಿ ಸರಕಾರಕ್ಕೆ ನೀಡಲಾಗಿದೆ. ಆದರೂ ವರದಿ ಜಾರಿಗೆ ಅಂತಿಮ ಗಡುವು ನೀಡಿರುವುದು ಕೃಷಿಕರಲ್ಲಿ ಭೀತಿಯನ್ನು ಉಂಟು ಮಾಡಿದೆ ಕೂಡಲೇ ಈ ವರದಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಜನಹಿತ ವೇದಿಕೆ ತಾಲೂಕು ಸಂಚಾಲಕ ಸಂತೋಷ್ ಕುಮಾರ್ ಪುದುವೆಟ್ಟು, ಸೂರ್ಯನಾರಾಯಣ ಶಿಶಿಲ್ಪ, ಶ್ರೀ ಧರ ರಾವ್, ನಿತ್ಯಾನಂದ ರೈ, ಸೆಬಾಸ್ಟಿನ್ ಕಳೆಂಜ, ಸೋಮಪ್ಪ ಪೂಜಾರಿ, ಅಶೋಕ್ ಭಟ್, ಜಯವಮ೯ ಜೈನ್, ಧನಂಜಯ ಗೌಡ, ಬಾಲಕೃಷ್ಣ ದೇವಾಡಿಗ, ದೇವಕಿ, ಅಬ್ದುಲ್ಲಾನೆಕ್ಕರೆ, ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಪಿಡಿಒ ಮೂಲಕ ಸರಕಾರ ಕ್ಕೆ ಮನವಿ ಸಲ್ಲಿಸಿದರು