ಬೆಳ್ತಂಗಡಿ: ‘ವಕೀಲರ ದಿನಾಚರಣೆಯ ಕಾರ್ಯಕ್ರಮವು ಬೆಳ್ತಂಗಡಿ ನ್ಯಾಯಾಲಯ ಆವರಣದಲ್ಲಿ ಡಿ.4 ರಂದು ನಡೆಯಿತು. ಹಿರಿಯ ನ್ಯಾಯವಾದಿ ಹರೀಶ್ಚಂದ್ರ ಬಳ್ಳಾಲರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿವಕೀಲರು ನ್ಯಾಯಾಲಯದ ಘನತೆ ಹಾಗೂ ಗೌರವವನ್ನು ಕಾಪಾಡತಕ್ಕದ್ದು ಹಾಗೂ ಕಿರಿಯ ವಕೀಲರು ದಾವೆಯನ್ನು ಹೂಡುವಾಗ ಅಧ್ಯಯನ ಮಾಡಿ ನ್ಯಾಯಾಲಯಕ್ಕೆ ಸರಿಯಾದ ಮಾಹಿತಿಯನ್ನು ಒದಗಿಸತಕ್ಕದ್ದು ಎಂದರು.
ವೇದಿಕೆಯಲ್ಲಿ ಅತಿಥಿಗಳಾಗಿ ಗೌರವಾನ್ವಿತ ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್ ಸಿ. ನ್ಯಾಯಾಧೀಶ ನಾಗೇಶಮೂರ್ತಿ ಮಾತನಾಡಿಯುವ ವಕೀಲರಿಗೆ ಸಮಾಜದಲ್ಲಿ ವಿಪುಲ ಅವಕಾಶಗಳಿದ್ದು ನ್ಯಾಯಾಧೀಶರು, ಸರಕಾರಿ ಅಭಿಯೋಜಕರು, ಕಾನೂನು ಪರಿಣಿತರು, ಇನ್ನಿತರ ಹುದ್ದೆಗಳನ್ನು ಪಡೆಯಬಹುದು ಎಂದರು. ವಕೀಲರ ಸಂಘ ಬೆಳ್ತಂಗಡಿ ಅಧ್ಯಕ್ಷ ಎಲೋಸಿಯಸ್ ಎಸ್. ಲೋಬೋ ಮಾತನಾಡಿ, ವಕೀಲರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಹಾಗೂ ಗೌರವವು ಇದ್ದು ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿಯೂ ನಮ್ಮದಾಗಿರುತ್ತದೆ ಹಾಗೂ ಬಡವರಿಗೆ, ದುರ್ಬಲರಿಗೆ, ಅಶಕ್ತರಿಗೆ ಕಾನೂನು ಮಾಹಿತಿ ನೀಡಿ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ನುಡಿದರು.
ಸತೀಶ್ ಕೆ.ಜಿ. ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ. ನ್ಯಾಯಾಧೀಶರು ಬೆಳ್ತಂಗಡಿ, ಕಿರಣ್ ಕುಮಾರ್ ಜಿ.ಕೆ ಮತ್ತು ದಿವ್ಯ ರಾಜ್ ಸಹಾಯಕ ಸರ್ಕಾರಿ ಅಭಿಯೋಜಕರು ಬೆಳ್ತಂಗಡಿ, ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ವಕೀಲರಾದ ಅಜಿತ್ ಎನ್. ಮತ್ತು ಜೆ.ಕೆ ಪೌಲ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಕೀಲರ ಸಂಘಕ್ಕೆ ಸೇರ್ಪಡೆಗೊಂಡ ಹೊಸ 12 ಜನ ಯುವ ವಕೀಲರನ್ನು ಶಾಲು ಹೊದಿಸಿ ಪುಷ್ಪ ಗುಚ್ಚ ನೀಡಿ ಅಧಿಕೃತವಾಗಿ ಸಂಘಕ್ಕೆ ಸ್ವಾಗತಿಸಲಾಯಿತು.
ಹಿರಿಯ ವಕೀಲ ಅಜಿತ್ ಎನ್. ಮತ್ತು ಜೆ.ಕೆ. ಪೌಲ್ ರವರು, ವಕೀಲರು ನ್ಯಾಯಾಲಯದ ಗೌರವಾನ್ವಿತ ಅಧಿಕಾರಿಗಳು ನಾವು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಸಮಾಜಕ್ಕೆ ಸಮಾಜದಿಂದ ಬರುವ ಕಕ್ಷಿಗಾರರಿಗೆ ಸರಿಯಾದ ಮಾಹಿತಿಯನ್ನು ಪಡಕೊಂಡು ನ್ಯಾಯವನ್ನು ದೊರಕಿಸಿ ಕೊಡಬೇಕಾದ ಕರ್ತವ್ಯ ನಮ್ಮದಾಗಿರುತ್ತದೆ ಎಂದು ನುಡಿದರು.
ಅಕ್ಷಯ್ ಟಿ. ಆರ್. ಪ್ರಾರ್ಥಿಸಿ, ವಕೀಲರ ಸಂಘದ ಕಾರ್ಯದರ್ಶಿ ಕೃಷ್ಣ ಶೆಣೈ ನಿರೂಪಿಸಿ, ಉಪಾಧ್ಯಕ್ಷ ವಸಂತ ಮರಕಡ ಧನ್ಯವಾದ ನೀಡಿದರು.