ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿ ಸಂವಿಧಾನ ವಿರೋಧಿ: ಶಿವಕುಮಾರ್
ಬೆಳ್ತಂಗಡಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ ತನ್ನ 6 ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಸಂಸ್ಥೆಗಳಾದ ವಿಮಾನ, ರೈಲ್ವೆ, ವಿಮೆ, ಬಂದರು, ಬ್ಯಾಂಕುಗಳನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಚಹಾ ಮಾರಿದಂತೆ ಮಾರಾಟ ಮಾಡುತ್ತಿದ್ದಾರೆ ಎಂದು ಸಿಐಟಿಯು ತಾಲೂಕು ಅಧ್ಯಕ್ಷ, ಹಿರಿಯ ನ್ಯಾಯವಾದಿ ಶಿವಕುಮಾರ್ ಎಸ್. ಎಂ ಆರೋಪಿಸಿದರು.
ಅವರು ಕಾರ್ಮಿಕ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು) ಕರೆ ನೀಡಿದ ಅಖಿಲ ಭಾರತ ಮುಷ್ಕರ ಬೆಂಬಲಿಸಿ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.
ಕೊರೋನಾ ಲಾಕ್ ಡೌನ್ ಹೆಸರಿನಲ್ಲಿ ದೇಶದ ಜನರನ್ನು ಕತ್ತಲಲ್ಲಿಟ್ಟು ದೇಶದ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿದಲ್ಲದೆ , ರೈತ , ಕಾರ್ಮಿಕ, ದಲಿತ ವಿರೋಧಿ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲಾಗಿದೆ. ಇದು ದೇಶದ ಸಂವಿಧಾನ ವಿರೋಧಿಯಾಗಿದೆ ಎಂದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ತಾಲೂಕು ಕಾರ್ಯದರ್ಶಿ ವಸಂತ ನಡ ದೇಶದ ಸಂಪತ್ತಿನ ಸೃಷ್ಟಿಕರ್ತ ಕಾರ್ಮಿಕ ವರ್ಗ ಹಾಗೂ ದೇಶದ ಜನತೆಗೆ ಅನ್ನ ನೀಡುವ ರೈತಾಪಿ ವರ್ಗದ ಪರವಾದ ಕಾನೂನುಗಳನ್ನು ಬಹುರಾಷ್ಟ್ರೀಯ ಕಂಪನಿಗಳ ಪರವಾಗಿ ಬದಲಾವಣೆ ಮಾಡುವ ಮೂಲಕ ಈ ಸರ್ಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಏಜೆಂಟ್ ಆಗಿ ವರ್ತಿಸುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಬೆಳ್ತಂಗಡಿ ಸಿಐಟಿಯು ಉಪಾಧ್ಯಕ್ಷ ಶೇಖರ್ ಎಲ್, ಮಹಿಳಾ ನಾಯಕಿ , ನ್ಯಾಯವಾದಿ ಸುಕನ್ಯಾ ಹೆಚ್ , ರೈತ ನಾಯಕ ನಿಲೇಶ್ ಹೆಚ್ ಪೆರಿಂಜೆ , ಕಾರ್ಮಿಕ ಮುಖಂಡರಾದ ಕುಸುಮ ಮಾಚಾರ್ , ಮಾಲಿನಿ ಕೈಕಂಬ , ಸುಧಾ ಕೆ ರಾವ್ , ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಸಂ. ಸಂಚಾಲಕ ನಾಗರಾಜ್ ಎಸ್ ಉಪಸ್ಥಿತರಿದ್ದರು.