ಬೆಳ್ತಂಗಡಿ: ಸುಮಾರು 100 ವರ್ಷಗಳ ಇತಿಹಾಸವಿರುವ, ಸ್ವಾತಂತ್ರ್ಯ ಪೂರ್ವ ಬ್ರಿಟಿಷ್ ಕಾಲದ ಸರಕಾರಿ ಪ್ರವಾಸಿ ಬಂಗಲೆ (ಐ.ಬಿ) ಬೆಳ್ತಂಗಡಿ ಇದರ ಕಟ್ಟಡವನ್ನು ಪೂರ್ಣವಾಗಿ ಮರು ರಚಿಸಲು ಸರಕಾರದಿಂದ 4.95 ಕೋಟಿ ರೂ ಮಂಜೂರಾಗಿದೆ. ಈ ಅನುದಾನದಲ್ಲಿ ತಾಲೂಕು ಕೇಂದ್ರದಲ್ಲಿರುವ ಐ.ಬಿ ಯನ್ನು ಆಧುನಿಕ ಎಲ್ಲಾ ಮೂಲಭೂತ ಸೌಲಭ್ಯಗಳು ಒಳಗೊಂಡಿರುವಂತೆ ಅತ್ಯಂತ ಸುಂದರವಾಗಿ ರಚಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ ಮಾದ್ಯಮದವರಿಗೆ ಮಾಹಿತಿ ನೀಡಿದರು.
ಐ.ಬಿ ಗೆ ಸಂಬಂಧಿಸಿದಂತೆ ಸರಕಾರದ ಹೆಸರಿನಲ್ಲಿ 2.64 ಎಕ್ರೆ ಸರಕಾರಿ ಭೂಮಿಯು ಇದೆ. ಇದರಲ್ಲಿ ಬ್ರಿಟಿಷ್ ಕಾಲದ ಕಟ್ಟಡವಿದೆ. ಕೆಲ ವರ್ಷಗಳ ಹಿಂದೆ ಇನ್ನೊಂದು ಆರ್.ಸಿ.ಸಿ ಕಟ್ಟಡ ನಿರ್ಮಿಸಲಾಗಿದ್ದು, ಇದೀಗ ಲೋಕೋಪಯೋಗಿ ಇಲಾಖೆಯ ವತಿಯಿಂದ ನೂತನ ಕಟ್ಟಡಕ್ಕೆ ಮಂಜೂರಾತಿ ದೊರೆತಿದ್ದು, ಶಿವಮೊಗ್ಗ ಸಂಪರ್ಕ ಮತ್ತು ಕಟ್ಟಡ ವಿಭಾಗದ ಮುಖ್ಯ ಇಂಜಿನಿಯರ್ ಅವರಿಗೆ ಆದೇಶ ಜಾರಿಯಾಗಿದೆ. ಮುಂದಕ್ಕೆ ಟೆಂಡರ್ ಪ್ರಕ್ರಿಯೆ ನಡೆದು ನೂತನ ಕಟ್ಟಡ ರಚನೆಯಾಗಲಿದೆ.
ತಾಲೂಕಿನ ಅಭಿವೃದ್ಧಿ ದೃಷ್ಟಿಯಲ್ಲಿ ಅಧಿಕಾರಿಗಳ ಸಭೆ ನಡೆಸಲು ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳು ನಿಲ್ಲಲು ಸುಸಜ್ಜಿತ ಪ್ರವಾಸಿ ಮಂದಿರ ಅಗತ್ಯವಿರುವುದನ್ನು ಮನಗಂಡು ಮುಖ್ಯಮಂತ್ರಿ ಹಾಗೂ ಸಚಿವರಿಗೆ ಮನವಿ ನೀಡಲಾಗಿತ್ತು. ಈಗ 4.95 ಕೋಟಿ ಮಂಜೂರಾಗಿದೆ.
–ಹರೀಶ್ ಪೂಂಜ ಶಾಸಕರು, ಬೆಳ್ತಂಗಡಿ
ಜಾಗದ ಗಡಿಗುರುತು, ಅಳತೆ ನಡೆಸಿ, ಸುಂದರವಾದ ಕಡ್ಟಡ ರಚನೆಗೆ ವಿನ್ಯಾಸ ನಕಾಶೆ ತಯಾರಿಸಿ, ಶಾಸಕರ ಜೊತೆ ಚರ್ಚಿಸಿ ಈ ಕಟ್ಟಡ ರಚಿಸಲಾಗುವುದು.
–ಶಿವಪ್ರಸಾದ ಅಜಿಲ ಎಇಇ. ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ