ಬೆಳ್ತಂಗಡಿ: ಆತ್ಮನಿರ್ಭರ ಭಾರತದ ಪರಿಕಲ್ಪನೆಗೆ ಪೂರಕವಾಗಿ ವೇಣೂರಿನ ಗ್ರಾಮ ವಿಕಾಸ ಸಮಿತಿ ಮಂಗಳೂರು ವಿಭಾಗ, ಸಹಕಾರ ಭಾರತಿ ದ.ಕ ಜಿಲ್ಲೆ, ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಇವರ ಆಶ್ರಯದಲ್ಲಿ ವಿವೇಕಾನಂದ ಪಾಲಿಟೆಕ್ನಿಕ್ನ ಸಹಯೋಗದಲ್ಲಿ, ವೇಣೂರು, ಅಳದಂಗಡಿ, ನಾರಾವಿ, ಸುಲ್ಕೇರಿಮೊಗ್ರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ನೇತೃತ್ವದಲ್ಲಿ ನ.30ರಿಂದ ಡಿ.5ರವರಗೆ ಒಂದು ವಾರದ ಉದ್ಯೋಗ ನೈಪುಣ್ಯ ತರಬೇತಿ ಶಿಬಿರವು ವೇಣೂರಿನ ವಿದ್ಯೋದಯ ಹಿ.ಪ್ರಾ ಶಾಲೆಯಲ್ಲಿ ಜರುಗಲಿದೆ ಎಂದು ಸಹಕಾರ ಭಾರತಿ ಬೆಳ್ತಂಗಡಿಯ ಅಧ್ಯಕ್ಷ ಹಾಗೂ ವೇಣೂರು ಸಹಕಾರಿ ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಹಾಗೂ ಸಹಕಾರ ಭಾರತಿ ಬೆಳ್ತಂಗಡಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಪೆಂರ್ಬುಡ ತಿಳಿಸಿದರು.
ಅವರು ನ.೨೫ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ತರಬೇತಿಯಲ್ಲಿ ೧೭ ವರ್ಷ ಮೇಲ್ಪಟ್ಟ ಯಾವುದೇ ಗ್ರಾಮದ ಆಸಕ್ತರು ಹೆಸರನ್ನು ನೋಂದಾಯಿಸಿ ಭಾಗವಹಿಸಬಹುದು. ಭಾಗವಹಿಸುವವರು ನಿಗದಿತ ಅರ್ಜಿ ನಮೂನೆಯನ್ನು ವೇಣೂರು, ನಾರಾವಿ ಅಳದಂಗಡಿ ಸುಲ್ಕೇರಿಮೊಗ್ರು ಸಹಕಾರಿ ಸಂಘದ ಶಾಖೆಗಳಿಂದ ಪಡೆದು ಭರ್ತಿ ಮಾಡಿ ನೀಡಬಹುದು. ಸ್ವ ಉದ್ಯೋಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಪುತ್ತೂರು ವಿವೇಕಾನಂದ ಪಾಲಿಟೆಕ್ನಿಕ್ ವತಿಯಿಂದ ವೃತ್ತಿ ತರಬೇತಿ ಪ್ರಮಾಣ ಪತ್ರ ನೀಡಲಾಗುವುದು. ತರಬೇತಿಯು ಪ್ರತಿ ದಿನ ಪೂರ್ವಾಹ್ನ ೧೦ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ನಡೆಯಲಿದೆ ಎಂದು ಹೇಳಿದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹರೀಶ್ ಪೂಂಜ, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಸಹಕಾರ ಭಾರತಿ ಜಿಲ್ಲಾ ಅಧ್ಯಕ್ಷರು, ಗ್ರಾಮವಿಕಾಸ ಸಮಿತಿಯ ಪ್ರಮುಖರು ಭಾಗವಹಿಸಲಿದ್ದಾರೆ.
ಡಿ.೫ ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಕಲ್ಲಡ್ಕ ಪ್ರಭಾಕರ ಭಟ್, ಸಹಕಾರ ಭಾರತಿ ಜಿಲ್ಲಾ ಕಾರ್ಯದರ್ಶಿ, ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತರಬೇತಿ ಶಿಬಿರದ ಪ್ರಧಾನ ಸಂಚಾಲಕ ಪ್ರತೀಶ ಪೂಜಾರಿ ಹೊಸಂಗಡಿ ಉಪಸ್ಥಿತರಿದ್ದರು.
ತರಬೇತಿಯಲ್ಲಿ ಫ್ಯಾಷನ್ ಡಿಸೈನಿಂಗ್, ಫುಡ್ ಟೆಕ್ನಾಲಜಿ, ಫ್ಯಾಬ್ರಿಕೇಷನ್, ಕೃಷಿ ಯಂತ್ರೋಪಕರಣ ದುರಸ್ತಿ, ಜೇನು ಸಾಕಾಣೆ, ಗ್ರಾಹಕ ಸೇವಾ ಕೇಂದ್ರ, ವಿದ್ಯುತ್ ಉಪಕರಣ ದುರಸ್ತಿ, ಫ್ಲಂಬಿಂಗ್ ಮತ್ತು ಎಲೆಕ್ಟ್ರೀಷಿಯನ್, ಹೈನುಗಾರಿಕೆ ಮೊಬೈಲ್ ಮತ್ತು ಸಿ.ಸಿ ಕ್ಯಾಮರಾ ಟೆಕ್ನೀಷಿಯನ್, ರಬ್ಬರ ಟ್ಯಾಪಿಂಗ್ ವಿಷಯದಲ್ಲಿ ತಜ್ಞರಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.