ಕಡಂದಲೆ ನದಿಯಲ್ಲಿ ಮುಳುಗಿ ವೇಣೂರಿನ ಸುಭಾಸ್ ಸಾವು
ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ತೆರಳಿದ್ದರು
ವೇಣೂರು: ಪಾಲಡ್ಕ ಗ್ರಾ.ಪಂ. ವ್ಯಾಪ್ತಿಯ ಕಡಂದಲೆಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿ ಇಲ್ಲಿನ ಶಾಂಭವಿ ನದಿಗೆ ಸ್ನಾನಕ್ಕೆಂದು ಹೋಗಿದ್ದ ವೇಣೂರಿನ ಸುಭಾಸ್ ಸೇರಿದಂತೆ ನಾಲ್ವರ ಮೃತಪಟ್ಟ ದುರ್ಘಟನೆ ಇಂದು ಸಂಭವಿಸಿದೆ.
ಕಡಂದಲೆ ಶ್ರೀಧರ ಆಚಾರ್ಯ ಅವರ ಮನೆಯಲ್ಲಿ ರವಿವಾರ ಮದುವೆ ಸಮಾರಂಭ ಜರಗಿತ್ತು. ಸಂಬಂಧಿಗಳಾದ ವೇಣೂರು ನಿವಾಸಿ ಸುಭಾಷ್ (೧೯) ಸೇರಿದಂತೆ ವಾಮಂಜೂರು ಮೂಡುಶೆಡ್ಡೆಯ ನಿಖಿಲ್ (೧೮), ಅರ್ಷಿತಾ (೨೦) ಹಾಗೂ ಬಜ್ಪೆ ಪೆರಾರದ ನಿವಾಸಿ ರವಿ (೩೦) ತೆರಳಿದ್ದರು. ಮನೆಯಲ್ಲೇ ಇದ್ದ ಇವರು ಇಂದು ಮನೆ ಸಮೀಪದ ಶಾಂಭವಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ನೀರಿನಲ್ಲಿ ಕೊಚ್ಚಿ ಹೋದ ಒಬ್ಬರನ್ನು ರಕ್ಷಿಸಲು ಮುಂದಾಗಿ ಎಲ್ಲರೂ ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ.