ತಾ|ನಲ್ಲಿ 25 ಸುಸಜ್ಜಿತ ಅಟೋ ರಿಕ್ಷಾ ನಿಲ್ದಾಣ: ಶಾಸಕ ಪೂಂಜ
ವೇಣೂರು: ಬೆಳ್ತಂಗಡಿ ಕ್ಷೇತ್ರದ ಹಳ್ಳಿಹಳ್ಳಿಗಳ ಅಭಿವೃದ್ಧಿ ನನ್ನ ಕನಸಾಗಿದೆ. ಬಹಳಷ್ಟು ಇಲಾಖೆ, ಪ್ರಾಧಿಕಾರಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಲಭ್ಯವಿರುತ್ತಿದ್ದರೂ ಅದು ಬೆಳ್ತಂಗಡಿ ಕ್ಷೇತ್ರಕ್ಕೆ ಬಂದಿರಲಿಲ್ಲ. ಸಾರಿಗೆ ಇಲಾಖೆಯಿಂದ ರೂ. 1 ಕೋಟಿ ಅನುದಾನದಲ್ಲಿ ತಾ|ನಲ್ಲಿ 25 ಅಟೋ ರಿಕ್ಷಾ ನಿಲ್ದಾಣ ನಿರ್ಮಿಸಲಾಗುವುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ವೇಣೂರು ಮುಖ್ಯಪೇಟೆಯಲ್ಲಿ ಗ್ರಾ.ಪಂ.ನ ರೂ. 30 ಲಕ್ಷ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಮಂಜೂರುಗೊಂಡಿರುವ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ಬಸ್ ನಿಲ್ದಾಣ ಕಾಮಗಾರಿಗೆ ಹಾಗೂ ರೂ. 2೦ ಲಕ್ಷ ವೆಚ್ಚದಲ್ಲಿ ವೇಣೂರು-ಮುದ್ದಾಡಿ ರಸ್ತೆಯ ಮರುಡಾಮಾರು ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿ, ವೇಣೂರು ಜನತೆಯ ಬಹುಕಾಲದ ಬೇಡಿಕೆ ಇಂದು ಈಡೇರಿದಂತಾಗಿದೆ. ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಇಲಾಖೆ ಹಾಗೂ ಪ್ರಾಧಿಕಾರಗಳಿಂದ ಅನುದಾನ ಪಡೆಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದೇವಸ್ಥಾನಕ್ಕೆ ರೂ. 55 ಲಕ್ಷ
ಜೀರ್ಣೋದ್ಧಾರಗೊಳ್ಳುತ್ತಿರುವ ವೇಣೂರು ದೇವಸ್ಥಾನದ ಅಭಿವೃದ್ಧಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈಗಾಗಲೇ ರೂ. 55 ಲಕ್ಷ ಮಂಜೂರುಗೊಳಿಸಿದ್ದು, ದೇಗುಲ ನಿರ್ಮಾಣ ಕಾರ್ಯ ವೇಗವಾಗಿ ಮುಂದುವರಿಸಲು ಸಾಧ್ಯವಾಗಿದೆ. ಮತ್ತೊಮ್ಮೆ ಮುಖ್ಯಮಂತ್ರಿಯವರಲ್ಲಿ ಮನವರಿಕೆ ಮಾಡಿ ಹೆಚ್ಚಿನ ಅನುದಾನ ಪಡೆದು ದೇಗುಲ ನಿರ್ಮಾಣವನ್ನು ಪೂರ್ಣಗೊಳಿಸುವ ಭರವಸೆ ಇದೆ ಎಂದರು.
ಹೆದ್ದಾರಿ ಅಭಿವೃದ್ಧಿಗೆ ರೂ. 2 ಕೋಟಿ
ವೇಣೂರು ಕ್ರಿಸ್ತರಾಜ ದೇವಾಲಯದಲ್ಲಿ ಎಂಆರ್ಪಿಎಲ್ ಸಹಾಯದಿಂದ ರೂ. ೧೦ ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಾಣ, ವೇಣೂರಿನಿಂದ ಬಂಟ್ವಾಳ ತಾಲೂಕಿನ ಮೂರ್ಜೆಯನ್ನು ಸಂಪರ್ಕಿಸುವ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಭಿವೃದ್ಧಿ ಪಡಿಸಲಾಗುವುದು. ರಾಜ್ಯಹೆದ್ದಾರಿ ೭೦ರ ಗುರುವಾಯನಕೆರೆಯಿಂದ ಗರ್ಡಾಡಿವರೆಗೆ ರೂ. 16 ಕೋಟಿ ವೆಚ್ಚದಲ್ಲಿ ಈಗಾಗಲೇ ಅಭಿವೃದ್ಧಿಯಾಗಿದೆ. ಬಾಕಿ ಉಳಿದಿರುವ ಗರ್ಡಾಡಿಯಿಂದ ವೇಣೂರುವರೆಗೆ ರೂ. 2 ಕೋಟಿ ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿಗೊಳ್ಳಲಿದ್ದು, ಕಾಮಗಾರಿಗೆ ಚಾಲನೆ ದೊರೆತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ವೇಣೂರು ಗ್ರಾ.ಪಂ. ಅಧ್ಯಕ್ಷೆ ಶೋಭಾ ಅರುಣ್ ಹೆಗ್ಡೆ ಮಾತನಾಡಿ, ವೇಣೂರಿನಲ್ಲಿ ಅಭಿವೃದ್ಧಿಯ ಮಹಾಪರ್ವ ನಡೆಯುತ್ತಿದೆ. ಅಭಿವೃದ್ಧಿ ಕೇವಲ ಮಾತಿನಿಂದಲ್ಲ. ಅದು ಕಾರ್ಯದಿಂದ ನಡೆಯಬೇಕು. ಅಂತಹ ನಡೆಯನ್ನು ಹೊಂದಿರುವ ಶಾಸಕರನ್ನು ಪಡೆದಿರುವ ನಾವು ಭಾಗ್ಯವಂತರು ಎಂದರು.
ವೇಣೂರು ಗ್ರಾ.ಪಂ. ಉಪಾಧ್ಯಕ್ಷ ಅರುಣ್ ಕ್ರಾಸ್ತ ಪ್ರಾಸ್ತಾವಿಸಿ, ವೇಣೂರು ಸರ್ವ ಧರ್ಮೀಯರ ತವರೂರು. ತಮ್ಮ ಅವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಯೋಜನೆಯಡಿ 1.50 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸ ನಡೆದಿದ್ದು, ಶಾಸಕರ ಅವಿರತ ಶ್ರಮದಿಂದ ಇದು ಸಾಧ್ಯವಾಗಿದೆ ಎಂದರು.
ಸಮ್ಮಾನ
ಶಾಸಕ ಹರೀಶ್ ಪೂಂಜ ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅವರನ್ನು ಗ್ರಾ.ಪಂ. ವತಿಯಿಂದ ನಾಗರಿಕರ ಪರವಾಗಿ ಸಮ್ಮಾನಿಸಲಾಯಿತು.
ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ಶಿವರಾವ್, ವೇಣೂರು ಕ್ರಿಸ್ತರಾಜ ದೇವಾಲಯದ ಧರ್ಮಗುರು ವಂ| ಪೀಟರ್ ಅರನ್ಹ, ಜೈನ ದಿಗಂಬರ ತೀರ್ಥಕ್ಷೇತ್ರ ಸಮಿತಿ ಕಾರ್ಯದರ್ಶಿ ಯಂ. ವಿಜಯರಾಜ ಅಧಿಕಾರಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜ, ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆ ಬಿಇ, ಪಂ. ಅಭಿವೃದ್ಧಿ ಅಧಿಕಾರಿ ಸುಧಾಕರ ಡಿ., ಕಾರ್ಯದರ್ಶಿ ವನಜಾ, ವೇಣೂರು ಗ್ರಾ.ಪಂ. ಸದಸ್ಯರಾದ ಲಕ್ಷ್ಮಣ ಪೂಜಾರಿ, ನೇಮಯ್ಯ ಕುಲಾಲ್, ಸತೀಶ್ ಹೆಗ್ಡೆ, ರಾಜೇಶ್ ಪೂಜಾರಿ ಮೂಡುಕೋಡಿ, ರಾಜೇಶ್ ಪೂಜಾರಿ ಕೈತೇರಿ, ಪುಷ್ಪಾ, ಹರೀಶ್ ಪಿ.ಎಸ್., ಯಶೋಧರ ಹೆಗ್ಡೆ, ಲೀಲಾವತಿ, ಶೋಭಾನಯನ, ಗಂಗಾಶೇಖರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ಞಾ ಪ್ರಭು ಪ್ರಾರ್ಥಿಸಿ, ಶಿಕ್ಷಕ ಅಜಿತ್ ಕುಮಾರ್ ಜೈನ್ ಕೊಕ್ರಾಡಿ ನಿರೂಪಿಸಿ, ಗ್ರಾ.ಪಂ. ಸದಸ್ಯ ಲೋಕಯ್ಯ ಪೂಜಾರಿ ವಂದಿಸಿದರು.