ಬೆಳ್ತಂಗಡಿ: ತಾಲೂಕು ಕಾನೂನು ಸೇವೆಗಳ ಸಮಿತಿ ಬೆಳ್ತಂಗಡಿ ಮತ್ತು ವಕೀಲರ ಸಂಘ ಬೆಳ್ತಂಗಡಿ ಇದರ ಸಂಯುಕ್ತಾಶ್ರಯದಲ್ಲಿ ಸಾಂಸ್ಕೃತಿಕ ಏಕತಾ ದಿನದ ಉದ್ಘಾಟನೆಯು ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.
ಹಿರಿಯ ಸಿವಿಲ್ ಮತ್ತು ಜೆ.ಎಂಎಫ್ಸಿ ಯ ನ್ಯಾಯಾಧೀಶ ನಾಗೇಶ್ ಮೂರ್ತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದಾದುದರಿಂದ ನಾವೆಲ್ಲರೂ ಈ ದೇಶದ ಎಲ್ಲಾ ಭಾಷೆ, ಜನಾಂಗ, ಧರ್ಮವನ್ನು ಗೌರವಿಸಬೇಕು ಎಂದರು.
ಮುಖ್ಯ ಅತಿಥಿ ನ್ಯಾಯಾಧೀಶ ಸತೀಶ್ ಕೆ.ಜಿ ರಾಷ್ಟ್ರೀಯ ಭಾವೈಕ್ಯತೆಯ ಪ್ರಮಾಣವಚನ ಭೋಧಿಸಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕ ಹಾಗೂ ದ.ಕ ಜಿಲ್ಲಾ ಗಮಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರೊ. ಮಧುರ ಮೋಹನ ಕಲ್ಲೂರಾಯ ಸಾಂಸ್ಕೃತಿಕ ಏಕತೆಯ ಬಗ್ಗೆ ಉಪನ್ಯಾಸವಿತ್ತರು. ಬೆಳ್ತಂಗಡಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಲೋಸಿಯಸ್ ಎಸ್ ಲೋಬೋ ಅವರು ದೇಶದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗದಂತೆ ತಮ್ಮ ತಮ್ಮ ಧರ್ಮ, ಭಾಷೆಗೆ ಗೌರವವನ್ನು ನೀಡಿಕೊಂಡು ಸಹಬಾಳ್ವೆಯಿಂದ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಕೆ. ಕೃಷ್ಣ ಶೆಣೈ, ಬೆಳ್ತಂಗಡಿ ಸಹಾಯಕ ಸರಕಾರಿ ಅಭಿಯೋಜಕ ಕಿರಣ್ ಕುಮಾರ್ ಜಿಕೆ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಮ್. ಎಚ್ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.
ಪಟ್ಟಣ ಪಂಚಾಯತ್ ಸಿಬ್ಬಂದಿ ವೆಂಕಟ್ರಮಣ ಶರ್ಮಾ ರವರು ಸ್ವಾಗತಿಸಿ, ಧನ್ಯವಾದವಿತ್ತರು. ವಕೀಲರ ಸಂಘದ ಕಾರ್ಯದರ್ಶಿ ಕೆ. ಕೃಷ್ಣ ಶೆಣೈ ಕಾರ್ಯಕ್ರಮ ನಿರೂಪಿಸಿದರು