HomePage_Banner_
HomePage_Banner_

ಬೆಳಾಲು ದಿ| ಕೃಷ್ಣಮೂರ್ತಿ ಬಾರಿತ್ತಾಯರಿಗೆ ಶೃದ್ಧಾಂಜಲಿ

 

ಬೆಳಾಲು: ಇತ್ತೀಚೆಗೆ ನಿಧನರಾದ ಪಾರಳ ಕೃಷ್ಣಮೂರ್ತಿ ಬಾರಿತ್ತಾಯ ರವರಿಗೆ ಅವರ ಉತ್ತರಕ್ರಿಯೆಯ ಸಂದರ್ಭದಲ್ಲಿ ಶ್ರದ್ಧಾಂಜಲಿ ಸಭೆ ಜರಗಿತು.
ಬೆಳಾಲು ಶ್ರೀ ಧ.ಮಂ.ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಮಕೃಷ್ಣ ಭಟ್ ರವರು ಬಾರಿತ್ತಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಕೃಷ್ಣಮೂರ್ತಿ ಬಾರಿತ್ತಾಯರು ಬೆಳಾಲಿನ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ಓರ್ವ ಮಾರ್ಗದರ್ಶಕರಂತೆ ಇದ್ದರು. ಈ ಕ್ಷೇತ್ರದಲ್ಲಿ ಅಪಾರ ತಿಳುವಳಿಕೆ ಉಳ್ಳವರಾಗಿ ಊರಿನ ಶಿಕ್ಷಣ ಸಂಸ್ಥೆ, ವ್ಯವಸಾಯ ಸೇವಾ ಸಹಕಾರಿ ಸಂಘ,ಗ್ರಾಮ ಪಂಚಾಯತ್ ಮುಂತಾದ ಸಂಘ ಸಂಸ್ಥೆಗಳಿಗೆ ಸದಾ ಪ್ರೇರಕರಾಗಿದ್ದರು. ಕೆಲವು ನಿರ್ಣಾಯಕ ಹಂತದಲ್ಲಿ ಬಾರಿತ್ತಾಯರು ಖಚಿತ ನಿಲುವಿನೊಂದಿಗೆ, ರಾಜಿಗೊಪ್ಪದೆ ಮಂಡಿಸುತ್ತಿದ್ದ ವಿಚಾರಗಳು ಕಹಿಯಾಗಿದ್ದರೂ ದೂರಗಾಮಿಯಾಗಿ ಸಿಹಿ ಪರಿಣಾಮವನ್ನು ಉಂಟುಮಾಡುತ್ತಿತ್ತು.


ಬಾರಿತ್ತಾಯರು ಕೌಟುಂಬಿಕ ಜವಾಬ್ಧಾರಿ ನಿರ್ವಹಣೆಗಾಗಿ ವೈಯಕ್ತಿಕ ಹಿತಾಸಕ್ತಿಯನ್ನು ತ್ಯಾಗ ಮಾಡಿದ್ದಾರೆ. ಅವರು ಸೊತ್ತು- ಸಂಪತ್ತಿನಲ್ಲಿ ಶ್ರಿಮಂತರಲ್ಲದಿದ್ದರೂ, ಬದುಕಿನುದ್ದಕ್ಕೂ ತೋರಿದ ಮಾನವೀಯತೆ ಮತ್ತು ಜೀವನ ಮೌಲ್ಯಕ್ಕಾಗಿ ಸದಾ ಸ್ಮರಣೀಯರಾಗಿದ್ದಾರೆ ಎಂದು ನುಡಿನಮನಗಳನ್ನು ಸಲ್ಲಿಸಿದರು.
ನಿವೃತ್ತ ಕೃಷಿ ಅಧಿಕಾರಿ ನಾರಾಯಣ ಸುವರ್ಣ ಮಾತನಾಡಿ, ಬಾರಿತ್ತಾಯ ಕುಟುಂಬ ಈ ಊರಿನ ಆದರ್ಶ ಕುಟುಂಬವಾಗಿದೆ. ನೇರ ನುಡಿಗಳಿಂದ ಬಾರಿತ್ತಾಯರು ನಿಷ್ಠುರವಾಗಿ ಕಂಡರೂ ಅಷ್ಟೇ ಸಹೃದಯಿಗಳೂ ಆಗಿದ್ದಾರೆ. ಬಹಳ ವಿಶೇಷವಾಗಿ ಅವರು ಊರಿನ ದೈವ-ದೇವರುಗಳ ಕಟ್ಟುಕಟ್ಟಳೆಗಳು ಮತ್ತು ಆ ಸಂಬಂಧಿಯಾಗಿ ಅಪಾರ ಮಾಹಿತಿ ಉಳ್ಳವರಾಗಿ ಊರಿಗೆ ನಿಘಂಟಿನ(ಡಿಕ್ಷ್ಣರಿ) ರೀತಿಯಲ್ಲಿದ್ದರು. ಬಾರಿತ್ತಾಯರ ಅಗಲುವಿಕೆ ತುಂಬಲಾರದ ನಷ್ಟ ಎಂದರು.
ಅಂತಾರಾಷ್ಟ್ರೀಯ ಜೇಸಿಐ ಸಂಸ್ಥೆಯ ಮಾಜಿ ಅಧಿಕಾರಿ,ರಾಷ್ಟ್ರೀಯ ತರಬೇತುದಾ ಪುತ್ತೂರಿನ ಕೃಷ್ಣಮೋಹನ್‌ಮಾತನಾಡಿ, ಬಾರಿತ್ತಾಯರ ಪುತ್ರ ಶಿವಕುಮಾರ ಬಾರಿತ್ತಾಯರು ಮೂಲಕ ಒದಗಿ ಬಂದ ಸಂಪರ್ಕ ಹಾಗೂ ಒಡನಾಟದ ನೆನಪುಗಳನ್ನು ಹಂಚಿಕೊಂಡು ಶ್ರದ್ಧಾಂಜಲಿ ಸಮರ್ಪಿಸಿದರು.
ಸಭೆಯಲ್ಲಿ ಪುತ್ತೂರಿನ ನ್ಯಾಯವಾದಿ ಮಹೇಶ್ ಕಜೆ, ಜೇಸಿಐನ ಮಾಜಿ ವಲಯಾಧ್ಯಕ್ಷ ಅಶೋಕ್ ಚೂಂತಾರು, ಮಾಯಾಗುತ್ತು ಪ್ರಕಾಶ್ ಜೈನ್, ಬೆಳಾಲು ಗ್ರಾಮ ಪಂಚಾಯತ್ತಿನ ಮಾಜಿ ಅಧ್ಯಕ್ಷರಾದ ಮೋಹನ್ ಗೌಡ, ಬೆಳಾಲು ಸೊಸೈಟಿಯ ನಿರ್ದೇಶಕರಾದ ಸುಲೈಮಾನ್ ಭೀಮಂಡೆ ಉಪಸ್ಥಿತರಿದ್ದರು ಧರ್ಮೇಂದ್ರ ಕುಮಾರ್ ಪುಚ್ಚೆಹಿತ್ಲು, ಖ್ಯಾತ ಯಕ್ಷಗಾನ ಕಲಾವಿದರಾದ ಲಕ್ಷ್ಮಣ ಗೌಡ ಪುಳಿತ್ತಡಿ ಉಪಸ್ಥಿತರಿದ್ದರು. ಊರಿನ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಜೇಸಿಐನ ಹಲವು ಅಧಿಕಾರಿಗಳು, ಸ್ನೇಹಿತರು, ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ದಿ| ಕೃಷ್ಣಮೂರ್ತಿ ಬಾರಿತ್ತಾಯರ ಪತ್ನಿ ಗುಲಾಬಿ ಬಾರಿತ್ತಾಯ, ಪುತ್ರರಾದ ಶಿವಕುಮಾರ ಬಾರಿತ್ತಾಯ, ಪ್ರಶಾಂತ್ ಬಾರಿತ್ತಾಯ ಹಾಗೂ ಕುಟುಂಬದ ಹಿರಿಯರು, ಸಹೋದರ ಸಹೋದರಿಯರು ಉಪಸ್ಥಿತರಿದ್ದರು.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.