ಸಭೆ-ಸಮಾರಂಭಗಳಿಗೆ ಅನುಮತಿ ಕಡ್ಡಾಯ: ಉಸ್ತುವಾರಿಗೆ ನೋಡೆಲ್ ನೇಮಕ

ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜನಜಾಗೃತಿ ಅಭಿಯಾನ

ಬೆಳ್ತಂಗಡಿ: ಕೋವಿಡ್ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಸರಕಾರದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅಭಿಯಾನ ನಡೆಸುವುದು, ಯಾವುದೇ ಮದುವೆ ಹಾಗೂ ಇತರ ಸಮಾರಂಭ ನಡೆಸಬೇಕಾದರೂ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದು ನಿಯಮಗಳನ್ನು ಪಾಲಿಸಬೇಕು, ಇದರ ಮೇಲುಸ್ತುವಾರಿಗೆ ಒಬ್ಬ ನೋಡೆಲ್ ಅಧಿಕಾರಿಯನ್ನು ನೇಮಿಸಬೇಕು, ಕೋವಿಡ್ ನಿಮಯ ಉಲ್ಲಂಘಿಸುವವರ ವಿರುದ್ಧ ಪೊಲೀಸರು ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳುವುದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಸೆ.30ರಂದು ಬೆಳ್ತಂಗಡಿ ತಾ.ಪಂ ಸಭಾಂಗಣದಲ್ಲಿ ನಡೆದ ಕೋವಿಡ್ ಮುಂಜಾಗ್ರತಾ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಶಾಸಕ ಹರೀಶ್ ಪೂಂಜ ವಹಿಸಿದ್ದರು. ಪುತ್ತೂರು ಸಹಾಯಕ ಕಮೀಷನರ್ ಡಾ| ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್ ಜೆ, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ತಾ.ಪಂ ಉಪಾಧ್ಯಕ್ಷೆ ವೇದಾವತಿ, ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ, ಜಿ.ಪಂ ಸದಸ್ಯರಾದ ಕೊರಗಪ್ಪ ನಾಯ್ಕ, ಧರಣೇಂದ್ರ ಕುಮಾರ್, ಸೌಮ್ಯಲತಾ ಜಯಂತ ಗೌಡ, ಶೇಖರ ಕುಕ್ಕೇಡಿ, ತಾ.ಪಂ ಸದಸ್ಯರು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ಜಿಪಸ ಧರಣೇಂದ್ರ ಕುಮಾರ್ ಅವರು ಹೊಸಂಗಡಿಯಲ್ಲಿ ಇತ್ತೀಚೆಗೆ ಅನುಮತಿ ಪಡೆಯದೆ ನಡೆದ ಸಮಾರಂಭದ ಬಳಿಕ ಗ್ರಾಮದಲ್ಲಿ ಪಾಸಿಟೀವ್ ಪ್ರಕರಣ ಹೆಚ್ಚಿದೆ. ಯಾವುದೇ ಸಭೆ, ಸಮಾರಂಭ ಮಾಡುವುದಿದ್ದರೂ ಪಿಡಿಒಗೆ ಮಾಹಿತಿ ಕೊಡಬೇಕು ಎಂದು ತಿಳಿಸಿದರು. ಮುಂಡಾಜೆಯಯಲ್ಲೂ ಧಾರ್ಮಿಕ ಕೇಂದ್ರದಲ್ಲಿ ನಡೆದ ಹಬ್ಬದ ನಂತರ ಪ್ರಕರಣ ಜಾಸ್ತಿಯಾಗಿದೆ. ಯಾವುದೇ ಮದುವೆ ಹಾಗೂ ಇತರ ಕಾರ್ಯಕ್ರಮ, ದೇವಸ್ಥಾನ, ಮಸೀದಿ, ಚರ್ಚ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ 50ಮಂದಿ ಸೇರಬಹುದು ಎಂದಿದ್ದರೂ ಈಗ ಜಾಸ್ತಿ ಜನ ಸೇರುವುದಕ್ಕೆ ಕಡಿವಾಣ ಹಾಕಬೇಕು ಎಂದು ಜಿಪಸ ಕೊರಗಪ್ಪ ನಾಕ ಅಭಿಪ್ರಾಯ ಪಟ್ಟರು.
ಈ ಸಂದರ್ಭ ಮಾತನಾಡಿದ ಶಾಸಕರು ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಪಂಚಾಯಿಗೆ ಮಾಹಿತಿ ಬೇಕು. ಹೊಸಂಗಡಿಯಲ್ಲಿ ನಡೆದ ಸಭೆಗೆ ಸಂಬಂಧಿಸಿದಂತೆ ಪಿಡಿಒ ಮತ್ತು ಆಡಳಿತಾಧಿಕಾರಿಗೆ ನೋಟೀಸು ನೀಡಿ ಎಂದರಲ್ಲದೆ, ಪ್ರತಿ ಗ್ರಾಮ ಪಂಚಾಯತದ ಪಿಡಿಒಗಳಿಗೂ ಸುತ್ತೋಲೆ ಕಳುಹಿಸಿ ತಮ್ಮ ಗ್ರಾ.ಪಂ ವ್ಯಾಪ್ತಿಯಲ್ಲಿ ಪಂಚಾಯತದ ಅನುಮತಿ ಪಡೆಯದೆ ಯಾವುದೇ ಕಾರ್ಯಕ್ರಮ ನಡೆಯದಂತೆ ನೋಡಿಕೊಳ್ಳಬೇಕು, ಅನುಮತಿ ಪಡೆದ ಕಾರ್ಯಕ್ರಮಕ್ಕೆ ಹೋಗಲು ಒಬ್ಬರನ್ನು ನೋಡೆಲ್ ಆಗಿ ನೇಮಿಸಬೇಕು, ಅಲ್ಲಿ ನಿಯಮ ಉಲ್ಲಂಘನೆಯಾದರೆ ಅದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಲಾಕ್‌ಡೌನ್ ವೇಳೆ ಒಂದೆರಡು ಕೇಸು ಹಾಕಲಾಗಿದೆ. ನಿಯಮ ಉಲ್ಲಂಘಿಸಿದ ಬಗ್ಗೆ ದೂರು ನೀಡಿದಲ್ಲಿ ಕೇಸು ಹಾಕಬಹುದು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಮಾಹಿತಿ ನೀಡಿದರು.
ನಗರ ಸೇರಿದಂತೆ ಗ್ರಾಮಾಂತರದಲ್ಲೂ ಅಂಗಡಿಗಳಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಗಳು, ಮಾಲಕರು ಮಾಸ್ಕ್ ಧರಿಸುವಂತಿಲ್ಲ, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವವರು ಕೊವಿಡ್ ಟೆಸ್ಟ್ ಮಾಡಿಸಿಕೊಳ್ಳಬೇಕು, ಕೊರೋನಾ ಟೆಸ್ಟ್ ಮಾಡಿಸಿಕೊಂಡವರು ಅದರ ರಿಪೋರ್ಟು ಬರುವ ತನಕ ಸ್ವಯಂ ಕ್ವಾರೆಂಟೈನ್‌ಗೆ ಒಳಪಡಬೇಕು ಎಂದು ಸದಸ್ಯರಾದ ಸುಧಾಕರ್, ಕೊರಗಪ್ಪ ಗೌಡ, ಜಯಶೀಲ ಸಲಹೆಯಿತ್ತರು. ಕೂಲಿ ಕೆಲಸ ಮಾಡುವ ಕುಟುಂಬದಲ್ಲಿ ಯಜಮಾನನಿಗೆ ಕೋವಿಡ್ ಪಾಸಿಟಿವ್ ಬಂದಾಗ ಆ ಕುಟುಂಬ ಸಂಕಷ್ಟಕ್ಕೆ ಒಳಗಾಗುತ್ತದೆ ಅವರಿಗೆ ಸರಕಾರದಿಂದ ನೆರವು ನೀಡಬೇಕು ಎಂದು ಶೇಖರ ಕುಕ್ಕೇಡಿ ಆಗ್ರಹಿಸಿದರು. ಅಂತವರಿಗಾಗಿ ಲಾಲದಲ್ಲಿ ಕೋವಿಡ್ ಕೇರ್ ಸೆಂಟರ್ ಇದ್ದು, ಈಗಾಗಲೇ ಅನೇಕ ಮಂದಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ಶಾಸಕರು ತಿಳಿಸಿದರು. ನಗರದಲ್ಲಿ ವ್ಯಕ್ತಿಯೋರ್ವರು ಪಾಸಿಟಿವ್ ಬಂದ ಬಳಿಕ ಯಾವುದೇ ಲಕ್ಷಣ ಇಲ್ಲ ಎಂದು ಹೇಳಿ ತಿರುಗಾಡಿಗೊಂಡಿದ್ದು, ಅವರ ಸಂಸ್ಥೆಯ ಇಬ್ಬರಿಗೆ ಪಾಸಿಟೀವ್ ಬಂದಿದೆ. ಆ ವ್ಯಕ್ತಿಯ ಬಗ್ಗೆ ಯಾಕೆ? ಪೊಲೀಸರಿಗೆ ದೂರು ನೀಡಿಲ್ಲ ಎಂದು ಶಾಸಕರು ಮುಖ್ಯಾಧಿಕಾರಿಯವರನ್ನು ಪ್ರಶ್ನಿಸಿದರು. ಈ ಬಗ್ಗೆ ಸೂಕ್ತ ಕ್ರಮ ಜರುಗಿಸಲಾಗಿದೆ ಎಂದು ಮುಖ್ಯಾಧಿಕಾರಿ ಸುಧಾಕರ್ ವಿವರಿಸಿದರು.
ಬೆಳ್ತಂಗಡಿ ಆರೋಗ್ಯ ಇಲಾಖೆಯಿಂದ ಕಳೆದ ಮಾರ್ಚ್‌ನಿಂದ ಇದುವರೆಗೆ 8 ಸಾವಿರ ಮಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. 3 ಸಾವಿರ ಮಂದಿಯ ರ್‍ಯಾಪಿಡ್ ಟೆಸ್ಟ್ ಆಗಿದೆ. ಈಗ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಉಚಿತ ತಪಾಸಣೆ ನಡೆಯುತ್ತಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು ಮಾಹಿತಿ ನೀಡಿ, ಕೊರೋನಾ ಟೆಸ್ಟ್‌ಗೆ ಸಾರ್ವಜನಿಕರ ಸ್ಪಂದನೆ ಇಲ್ಲ ಎಂದು ತಿಳಿಸಿದರು. ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 146 ಅಂಗನವಾಡಿ ಕಾರ್ಯಕರ್ತೆಯವರು ಕೋವಿಡ್‌ಗೆ ಸಂಬಂಧಿಸದಂತೆ ಕಾರ್ಯನಿರ್ವಹಿಸಿದ್ದಾರೆ ಎಂದು ಸಿಡಿಪಿಒ ಪ್ರಿಯಾ ಆಗ್ನೇಸ್ ತಿಳಿಸಿದರು. ಶಿಕ್ಷಣ ಇಲಾಖೆಯಿಂದ 174ಶಿಕ್ಷಕರು ಕೋವಿಡ್‌ಗೆ ಸಂಬಂಧಿಸಿದಂತೆ ಕೆಲಸ ಮಾಡಿದ್ದಾರೆ. ತಾಲೂಕಿನಲ್ಲಿ ವಿದ್ಯಾಗಮ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಶಿಕ್ಷಣ ಇಲಾಖೆಯ ಶಂಭುಶಂಕರ್ ಮಾಹಿತಿ ನೀಡಿದರು.
ಸಮಾಜ ಕಲ್ಯಾಣ, ತೋಟಗಾರಿಕೆ, ಕೃಷಿ, ಲೋಕೋಪಯೋಗಿ ಇಲಾಖೆ, ತಾಲೂಕು ಪಂಚಾಯತು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಯಿಂದ ಆದ ಕೆಲಸಗಳ ಕುರಿತು ಮಾಹಿತಿ ನೀಡಿದರು. ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಮಾತನಾಡಿ, ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗಿದೆ. ಹೊಸಂಗಡಿಯಲ್ಲಿ ಕೋವಿಡ್ ಪಾಸಿಟೀವ್ ಬಂದ ಎಲ್ಲರನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ. ಸ್ವಯಂ ಪ್ರೇರಿತ ಕೋವಿಡ್ ಟೆಸ್ಟ್‌ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ತಾ.ಪಂ ಸಹಾಯಕ ಲೆಕ್ಕಅಧೀಕ್ಷಕ ಗಣೇಶ್ ಪೂಜಾರಿ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.