ಬೆಳ್ತಂಗಡಿ: ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿನ ಪ್ರಯಾಣದಲ್ಲಿ ನಡೆಸಲು ಬೇಕಾದ ಎಲ್ಲಾ ವ್ಯವಸ್ಥೆಗಳ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ರ ಕ್ರಮಗಳನ್ನು ಕೈಗೊಳ್ಳುವುದಾಗಿ ದ.ಕ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಹೇಳಿದರು.
ಅವರು ಸೆ30ರಂದು ಬೆಳ್ತಂಗಡಿ ತಾಲೂಕಿಗೆ ಭೇಟಿ ನೀಡಿ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ನಂತರ ಬೆಳ್ತಂಗಡಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿ ಸರಕಾರದ ವತಿಯಿಂದ ನೂತನವಾಗಿ ಅಳವಡಿಸಲಾದ ಡಯಾಲೀಸಿಸ್ ಯಂತ್ರಕ್ಕೆ ಚಾಲನೆ ನೀಡಿ, ಬಳಿಕ ಬೆಳ್ತಂಗಡಿ ನ.ಪಂ ವ್ಯಾಪ್ತಿಯ ಕಲ್ಲಗುಡ್ಡೆಯ ಮನೆ ನಿವೇಶನವನ್ನು ವೀಕ್ಷಿಸಿದರು.
ನಂತರ ಮಾಧ್ಯಮದವರ ಜೊತೆ ಮಾತನಾಡಿ, ಬೆಳ್ತಂಗಡಿ ಆಸ್ಪತ್ರೆಯಲ್ಲಿ ಡಯಾಲೀಸಿಸ್ ಮಾಡುವ ಬಗ್ಗೆ ದೂರುಗಳು ಬರುತ್ತಿದ್ದು, ಈಗಾಗಲೇ ಜಿಲ್ಲಾ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಹೆಚ್ಚಿಸಬೇಕು, ವೆಂಟಿಲೇಟರ್ ಹೇಗೆ ಸದುಪಯೋಗ ಮಾಡಬಹುದು. ನ್ಯೂಟ್ರಿಷನ್ ಪುಡ್ ನೀಡುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ವೇತನಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ ಮಾಡುತ್ತಿರುವುದರಿಂದ ಕೋವಿಡ್ ರೋಗಿಗಳಿಗೆ ಸಮಸ್ಯೆಯಾಗಿದೆ. ಪ್ರತಿಭಟನೆ ತೀವ್ರಗೊಂಡಲ್ಲಿ ಮತ್ತಷ್ಟು ತೊಂದರೆಗಳಾಗಲಿದ್ದು, ಅನಿವಾರ್ಯವಾದರೆ ಬದಲಿ ವ್ಯವಸ್ಥೆಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ರೋಗಿಗಳಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಯಾಗಬಾರದು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು
ಹಿಂದೆ ದಿನಕ್ಕೆ ಒಂದು ಸಾವಿರದಿಂದ ಎರಡು ಸಾವಿರದವರೆಗೆ ಕೋವಿಡ್ ಟೆಸ್ಟ್ ಜಿಲ್ಲೆಯಲ್ಲಿ ನಡೆಯುತ್ತಿತ್ತು. ಈಗ ಇದು ಮೂರು ಪಟ್ಟು ಜಾಸ್ತಿ ಆಗಿದೆ. ಆದರೆ ಡೆತ್ ರೇಟ್ ಬಹಳಷ್ಟು ಕಡಿಮೆಯಾಗಿದೆ. ಪ್ರತಿ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಕೋವಿಡ್ ಟೆಸ್ಟ್ಗೆ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡುವುದು ಅಗತ್ಯವಾಗಿದೆ ಎಂದು ಹೇಳಿದರು.
ಕೋವಿಡ್ ಪಾಸಿಟಿವ್ ಬಂದವರಿಗೆ ಬಿಪಿಎಲ್ ಕಾರ್ಡ್ ಇದ್ದರೆ ಅವರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆಯಿದೆ. ಅಂತವರು ಜಿಲ್ಲೆಯಲ್ಲಿ ನೋಡೆಲ್ ಅಧಿಕಾರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು. ಬೆಳ್ತಂಗಡಿ ತಾಲೂಕಿನಲ್ಲಿಯೂ ಲಾಲದಲ್ಲಿ ಸರಕಾರದ ವತಿಯಿಂದ ಕೋವಿಡ್ ಕೇರ್ ಸೆಂಟರ್ ಇದ್ದು, ಇಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಳೆದ ಬಾರಿ ತಾಲೂಕಿನಲ್ಲಿ ನೆರೆ ಬಂದು ಮನೆ ಕಳೆದುಕೊಂಡವರ ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ರೂ. ೮ ಕೋಟಿಯಲ್ಲಿ ರೂ.೫ ಕೋಟಿಯನ್ನು ರಾಜೀವ ಗಾಂಧಿ ವಸತಿ ನಿಗಮಕ್ಕೆ ಬಿಡುಗಡೆ ಮಾಡಲಾಗಿದ್ದು, ಕೆಲವೊಂದು ಫಲಾನುಭವಿಗಳಿಗೆ ತಾಂತ್ರಿಕ ತೊಂದರೆಯಿಂದ ಹಣ ಮಂಜೂರಾತಿಗೆ ಸಮಸ್ಯೆಯಾಗಿದೆ ಇದನ್ನು ಶೀಘ್ರ ಪರಿಹರಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜ, ಪುತ್ತೂರು ಸಹಾಯಕ ಕಮೀಷನರ್ ಡಾ. ಯತೀಶ್ ಉಲ್ಲಾಳ್, ತಹಶೀಲ್ದಾರ್ ಮಹೇಶ್ ಜೆ. ತಾಲೂಕು ಆರೋಗ್ಯಾಧಿಕಾರಿ ಕಲಾಮಧು, ಅಡಳಿತ ವೈದ್ಯಾಧಿಕಾರಿ ಡಾ. ಚಂದ್ರಕಾಂತ್, ಮುಖ್ಯಾಧಿಕಾರಿ ಸುಧಾಕರ್, ಇಂಜಿನಿಯರ್ ಮಹಾವೀರ ಆರಿಗ, ನ.ಪಂ ಸದಸ್ಯರಾದ ಜಯಾನಂದ, ಶರತ್ಕುಮಾರ್ ಶೆಟ್ಟಿ, ಅಂಬರೀಶ್, ಆಸ್ಪತ್ರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.